ದೇವನಹಳ್ಳಿ : ತಾಲೂಕಿನ ಕನ್ನಮಂಗಲ ಗ್ರಾ.ಪಂ. ವ್ಯಾಪ್ತಿಯ ಪೂಜನಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ಮತ್ತು ನಿವೇಶನದ ಜಾಗ ದಿನಕ್ಕೊಂದು ಹೊಸರೂಪಗೊಂಡು ಆರೋಪ ಪ್ರತ್ಯಾರೋಪ ಮುಗಿಲು ಮುಟ್ಟಿದ್ದು ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಟಿ. ಶ್ರೀನಿವಾಸ್ರನ್ನು ಕೂಡಲೆ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತ ಭವನದ ಮುಂಭಾಗ ಜಡಿ ಮಳೆಯ ನಡುವೆಯೂ ಕನ್ನಮಂಗಲ ಗ್ರಾ.ಪಂ. ಸದಸ್ಯ ಕೆ. ಸೋಮಶೇಖರ್ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದರು.
ಗ್ರಾ.ಪಂ. ಅಧಿಕಾರಿ ಟಿ.ಶ್ರೀನಿವಾಸ್ ಯಾರದೋ ಜಾಗವನ್ನು ಯಾರಿಗೋ ನಕಲಿ ದಾಖಲೆ ಸೃಷ್ಠಿಸಿ ಇ-ಖಾತಾ ಮಾಡಿಕೊಟ್ಟಿದ್ದಾರೆ, ಕೂಡಲೆ ಟಿ. ಶ್ರೀನಿವಾಸ್ರನ್ನು ಅಮಾನತು ಮಾಡಿ ಸತ್ಯಾ-ಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಜಿಲ್ಲಾಡಳಿತ ಭವನದ ಮುಂದೆ ತಮ್ಮ ಬೆಂಬಲಿಗರ ಜೊತೆ ಅಹೋರಾತ್ರಿ ಧರಣಿ ಮಾಡುತ್ತಿದ್ದು ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ತಿಳಿಸಿದರು.
ಮನವಿ ನೀಡಲೆಂದು ಬಂದಿದ್ದ ಸೋಮಶೇಖರ್ ಹಾಗೂ ಬೆಂಬಲಿಗರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸ್ಥಳದಲ್ಲಿರಲಿಲ್ಲ, ಅಲ್ಲಿನ ಕಛೇರಿ ಅಧಿಕಾರಿಗಳಿಗೆ ನಡೆದಿರುವ ಎಲ್ಲಾ ವಿದ್ಯಮಾನಗಳನ್ನು ಕನ್ನಮಂಗಲ ಗ್ರಾ.ಪಂ. ವ್ಯಾಪ್ತಿಯ ಪೂಜನಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ಮತ್ತು ನಿವೇಶನದ ಜಾಗದ ದಾಖಲೆಗಳನ್ನು ತೋರಿಸಿ ವಿವಿರಣೆ ನೀಡಿದರು, ಅಧಿಕಾರಿಗಳು ಸಹ ಧರಣಿ ಕೈಬಿಡಿ ಜಿಲ್ಲಾಧಿಕಾರಿಗಳು ಹಾಗೂ ಸಿ.ಇ.ಓ ಬಂದ ನಂತರ ನಾವು ತಿಳಿಸುತ್ತೇವೆ ಎಂದರು, ಆದರೆ ಸೋಮಶೇಖರ್ ಯಾವುದೇ ಕಾರಣಕ್ಕೂ ಧರಣಿ ಕೈಬಿಡುವುದಿಲ್ಲ ದಾಖಲೆ ಪರಿಶೀಲನೆ ನಡೆಸಿ ಚಂದ್ರೇಗೌಡರಿಗೆ ನ್ಯಾಯ ಒದಗಿಸಿ ಎಂದರು.
ಗ್ರಾ.ಪಂ. ಸದಸ್ಯ ಸೋಮಶೇಖರ್ ಮಾತನಾಡಿ 2021ರ ಆಗಸ್ಟ್ 21ರಂದು ಹಿಂದಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹಜರ್ ಮಾಡಿ, ತಾ.ಪಂ. ಇ.ಓಗಳಿಗೆ ವರದಿ ಸಲ್ಲಿಸಿರುತ್ತಾರೆ, ವರದಿಯಲ್ಲಿ ವಿಸ್ತೀರ್ಣ 7 ಜನರಿಗೆ ಸೇರಿರುತ್ತದೆ ಖಾತೆದಾರರಿಗೆ ಒಟ್ಟು 803.41 ಚದರ ಮೀಟರ್ ಒಳಗೊಂಡಿರುತ್ತದೆ ಎಂದು ತಿಳಿಸಿದ್ದರು.
ಈಗ ಬಂದಿರುವ ಪಿ.ಡಿ.ಓ ಟಿ.ಶ್ರೀನಿವಾಸ್ ಈ ಖಾತೆಗೆ ಸಂಬಂದಿಸಿದಂತೆ ತಾ.ಪಂ ಇ.ಓ ಲಾಗಿನ್ಗೆ ತಿದ್ದುಪಡಿ ಮಾಡಲು ವರ್ಗಾಯಿಸಿದೆ, ಅದರಲ್ಲಿ 877.92 ಚದರಮೀಟರ್ಗೆ ಹೆಚ್ಚಿಸಿ ಈ-ಖಾತೆ ಮಾಡಿರುತ್ತಾರೆ, ಇದರಲ್ಲಿ ಪಿಡಿಓ ಅಕ್ರಮ ಖಾತೆ ಮಾಡಿರುವುದು ಕಂಡು ಬಂದಿದ್ದು ಕೂಡಲೆ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.