ಚನ್ನಪಟ್ಟಣ: ತಾಲೂಕಿನ ವಂದಾರಗುಪ್ಪೆ ಸಮೀಪದ ಪೌಳಿದೊಡ್ಡಿ ಗ್ರಾಮದ ಬಳಿ ಜಿಪಂ ವತಿಯಿಂದ ನಿರ್ಮಿಸಿದ್ದ ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್ಎಫ್) ಘಟಕ ಬುಧವಾರ ಬೆಂಕಿಗಾಹುತಿಯಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಸಂಪೂರ್ಣ ಘಟಕ ಬೆಂಕಿಯ ಕೆನ್ನಾಲಿಗೆ ತುತ್ತಾಗಿದೆ. ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಲು ಸತತವಾಗಿ ಕಾರ್ಯಾಚರಣೆ ನಡೆಸಿದ್ದು, ಘಟನೆ ಹಿನ್ನೆಲೆಯಲ್ಲಿ ಕೋಟ್ಯಾಂತರ ರೂ ನಷ್ಟ ಉಂಟಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಪಂ ಸಿಇಒ ದಿಗ್ವಿಜಯ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಸೇರಿದಂತೆ ಹಲವಾರು ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದರು.
ಟೀ ಕುಡಿಯಲು ಹೋಗಿ ಉಳಿದ ಜೀವಗಳು!: ಈ ಅವಘಡ ನಡೆಯುವ ವೇಳೆ ಘಟಕದಲ್ಲಿ 17 ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಅವಘಡ ನಡೆಯುವ ಕೆಲನಿಮಿಷದ ಮುಂದೆ ಇವರೆಲ್ಲರೂ ಟೀ ಕುಡಿಯುವ ಸಲುವಾಗಿ ಘಟಕದ ಹೊರಭಾಗಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಇವರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲವಾದರೆ, ಅವಘಡದಲ್ಲಿ ಪ್ರಾಣಾಪಾಯವೂ ಆಗುವ ಸಂಭವವಿತ್ತು ಎಂದು ಪ್ರತ್ತಕ್ಷದರ್ಶಿಗಳು ತಿಳಿಸಿದ್ದಾರೆ.
ಏಳು ಗಂಟೆಗೂ ಹೆಚ್ಚುಕಾಲ ಕಾರ್ಯಾಚರಣೆ!: ಘಟಕಕ್ಕೆ ಬೆಂಕಿ ಹೊತ್ತಿಕೊಂಡ ತಕ್ಷಣವೇ ಸಿಬ್ಬಂದಿಗಳು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಏಳು ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸುವ ಕೆಲಸ ಮಾಡಿದ್ದಾರೆ. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಚನ್ನಪಟ್ಟಣ, ರಾಮನಗರ, ಕನಕಪುರ ಹಾಗೂ ಬೆಂಗಳೂರಿನ ಅಂಜನಾಪುರ ಅಗ್ನಿಶಾಮಕ ದಳ ನಾಲ್ಕು ವಾಹನಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಒಣ ತ್ಯಾಜ್ಯವಿದ್ದ ಕಾರಣ ಬೆಂಕಿ ಕ್ಷಣಮಾತ್ರದಲ್ಲಿ ವ್ಯಾಪಿಸುತ್ತಿದದ್ದು, ಕಾರ್ಯಾಚರಣೆಗೂ ಅಡ್ಡಿಯುಂಟು ಮಾಡುತಿತ್ತು.
ಏನಿದು ಘಟಕ!: ಪೌಳಿದೊಡ್ಡಿ ಗ್ರಾಮದ ಸಮೀಪ ಜಿಪಂ ವತಿಯಿಂದ ಗ್ರಾಮ ಪಂಚಾಯಿತಿಗಳ ಘನತ್ಯಾಜ್ಯದ ಸಮರ್ಪಕ ನಿರ್ವಹಣೆಗಾಗಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಘಟಕವನ್ನು ನಿರ್ಮಿಸಲಾಗಿತ್ತು. ಪಂಚಾಯಿತಿಗಳ ಒಣ ಕಸವನ್ನು ಇಲ್ಲಿಗೆ ತಂದು ವೈಜ್ಞಾನಿಕವಾಗಿ ವಿಂಗಡಣೆ ಮಾಡುವುದು ಈ ಘಟಕದ ಕೆಲಸವಾಗಿತ್ತು. 1 ಎಕರೆ ಪ್ರದೇಶದಲ್ಲಿ ಸುಮಾರು 2.50 ಕೋಟಿ ವೆಚ್ಚದಲ್ಲಿ ಈ ಎಂಆರ್ಎಫ್ ಘಟಕ ನಿರ್ಮಾಣ ಮಾಡಲಾಗಿತ್ತು. ಮಂಗಳ ರಿಸೋರ್ಸ್ ಮ್ಯಾನೇಜ್ಮೆಂಟ್ ಎಂಬ ಖಾಸಗಿ ಕಂಪನಿ ಈ ಘಟಕದ ನಿರ್ವಹಣೆಯ ಹೊಣೆ ಹೊತ್ತಿತು.
ಈ ಘಟಕವೂ ನಿತ್ಯ 10 ಟನ್ ಘನತ್ಯಾಜ್ಯವನ್ನು ವಿಂಗಡಣೆ ಮಾಡಿ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ, ದೊಡ್ಡ ಯಂತ್ರಗಳ ನೆರವಿನಿಂದ ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತಿತು. ಸಾರ್ವಜನಿಕ ಘನ ತ್ಯಾಜ್ಯದ ಸಮರ್ಪಕ ನಿರ್ವಹಣಾ ಉದ್ದೇಶದ ಈ ಎಂಆರ್ಎಫ್, ರಾಜ್ಯದಲ್ಲಿ ಕಾರ್ಯಾರಂಭಿಸಿರುವ ಮೂರನೇ ಘಟಕ ಎಂಬುದು ವಿಶೇಷ.