ಬೆಂ. ಗ್ರಾ. ಜಿಲ್ಲೆ: ಕೃಷಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆ ಹಾಗೂ ಆತ್ಮ ಯೋಜನೆಯಡಿ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಜಿಲ್ಲೆಯ ವಿವಿಧ ಭಾಗಗಳಿಂದ ರೈತ ಮಹಿಳೆಯರು ಆಗಮಿಸಿ ಮನೆಯಿಂದಲೇ ಸಿರಿಧಾನ್ಯಗಳಿಂದ ತಯಾರಿಸಿದ್ದ ಸಿಹಿ, ಖಾರ ಮತ್ತು ಮರೆತು ಹೋದ ವಿವಿಧ ಖಾದ್ಯಗಳನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸಿದರು.ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಹಾಗೂ ಜಿ.ಪಂ ಸಿ.ಇ.ಒ ಡಾ.ಕೆ.ಎನ್ ಅನುರಾಧ ಅವರು ವಿವಿಧ ಖಾದ್ಯಗಳನ್ನು ಸೇವನೆ ಮಾಡುವ ಮೂಲಕ ಸಿರಿಧಾನ್ಯಗಳ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ 32 ರೈತ ಮಹಿಳೆಯರು ಭಾಗವಹಿಸಿದ್ದರು. ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಅಥವಾ ತಿನಿಸುಗಳ ಪ್ರದರ್ಶನ, ತಯಾರಿಕೆಗೆ ಬಳಸಿದ ಪದಾರ್ಥಗಳ ಪ್ರದರ್ಶನ ತೋರಿಕೆ (presentation/ appearance), ರುಚಿ, ಸುವಾಸನೆಗಳ ಮೇಲೆ ಅಂತಿಮ ನಿರ್ಧಾರ ಕೈಗೊಂಡು ಮೂವರಿಗೆ ಬಹುಮಾನ ವಿತರಿಸಲಾಯಿತು. ಮೂವರು ರೈತ ಮಹಿಳೆಯರು ರಾಜ್ಯ ಮಟ್ಟದಲ್ಲಿ ನಡೆಯುವ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಭಾಗವಹಿಸುವರು.
ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ಉಪನಿರ್ದೇಶಕಿ ಗಾಯಿತ್ರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.