ರಾಮನಗರ: ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರು ಮತ್ತು ಅಗತ್ಯ ಸಿಬ್ಬಂದಿಗಳನ್ನು ಶೀಘ್ರದಲ್ಲಿ ಭರ್ತಿಮಾಡಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಅವರು ಜ. 23ರ ಗುರುವಾರ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲಾಸ್ಪತ್ರೆಯಲ್ಲಿ ವೈದ್ಯರುಗಳು, ನರ್ಸ್ಗಳು, ಪ್ರಯೋಗಾಲಯ ಸಿಬ್ಬಂದಿಗಳು, ತಂತ್ರಜ್ಞರು ಹಾಗೂ ಗ್ರೂಪ್ `ಡಿ’ ನೌಕರರನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾಸ್ಪತ್ರೆಯಲ್ಲಿ ಕೆಲವು ಪರೀಕ್ಷೆಗಳನ್ನು ಹೊರಗಡೆ ಮಾಡಿಸಿಕೊಂಡು ಬರಲು ಚೀಟಿ ನೀಡುತ್ತಿರುವುದಾಗಿ ದೂರುಗಳು ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳಿಗೆ ಹೊರಗಡೆ ಪರೀಕ್ಷೆ ಮಾಡಿಸಿಕೊಂಡು ಬರಲು ಸೂಚಿಸಬಾರದು ಎಂದರು.
ಆಸ್ಪತ್ರೆಗೆ ಅಗತ್ಯವಿರುವ ಹೊಸ ಯಂತ್ರೋಪಕರಣಗಳನ್ನು ತುರ್ತಾಗಿ ಪೂರೈಸಲಾಗುವುದು ಹಾಗೂ ಆಸ್ಪತ್ರೆಯಲ್ಲಿ ಲಭ್ಯವಿರುವ ಯಂತ್ರೋಪಕರಣಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವ ಹಿಸಬೇಕು ಹಾಗೂ ವಾರ್ಷಿಕ ನಿರ್ವಹಣೆಯನ್ನು ಅರ್ಹ ಯಂತ್ರೋ ಪಕರಣಗಳ ನಿರ್ವಾಹಕರಿಂದ ಮಾಡಿಸುವಂತೆ ಸೂಚಿಸಿದರು.ತಾಲ್ಲೂಕು ಆಸ್ಪತ್ರೆಯು ತುಂಬಾ ಹಳೆಯದಾಗಿದ್ದು ಅದನ್ನು ದುರಸ್ತಿ ಮಾಡಿಸಲು ಸಾಧ್ಯವಿಲ್ಲ. ಆದುದರಿಂದ ಹೊಸ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ವೈದ್ಯರುಗಳು, ನರ್ಸ್ಗಳು, ಪ್ರಯೋಗಾಲಯ ಸಿಬ್ಬಂದಿಗಳು, ತಂತ್ರಜ್ಞರು ಹಾಗೂ ಗ್ರೂಪ್ `ಡಿ’ ನೌಕರರನ್ನು ನೇಮಿಸಿಕೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದರು.ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ಯಂತ್ರ ಮ್ಯಾಮೋಗ್ರಫಿಯನ್ನು ಉದ್ಪಾಟಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಹಾಗೂ ಆಸ್ಪತ್ರೆಯ ಸೌಲಭ್ಯಗಳ ಕುರಿತು ಹೊರ ರೋಗಿಗಳೊಂದಿಗೆ ವಿಚಾರಣೆ ನಡೆಸಿದರು.
ಜಿಲ್ಲಾಸ್ಪತ್ರೆಯ ಆವರಣದಲ್ಲಿ 50 ಹಾಸಿಗೆಗಳ ಸಾಮಾರ್ಥ್ಯದ ಕ್ರಿಟಿಕಲ್ ಕೇರ್ ಯೂನಿಟ್ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
ಪ್ರಸ್ತುತ ಆಸ್ಪತ್ರೆಯಲ್ಲಿ 8 ಐ.ಸಿ.ಯು., 7 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಹೆಚ್ಚು ಮಾಡಲು ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಎ. ಇಕ್ಪಾಲ್ ಹುಸೇನ್, ರಾಮನಗರ ನಗರಸಭಾ ಅಧ್ಯಕ್ಷ ಶೇಷಾದ್ರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಾಜು, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಆರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್, ಜಿಲ್ಲಾ ಶಸ್ತಚಿಕಿತ್ಸಾಧಿಕಾರಿ ಡಾ. ಮಂಜುನಾಥ್, ಡಾ.ಕುಮಾರ್, ಡಾ.ರಾಜು, ಜಿಲ್ಲಾಸ್ಪತ್ರೆಯ ವೈದ್ಯರುಗಳು ಹಾಗೂ ಇತರರಿದ್ದರು.