ಬೆಂಗಳೂರು: ದಿ.ರಾಜರತ್ನಂ ರವರ 115ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಹಾಗೂ ಪ್ರತಿಭಾ ಹೊಂಗಿರಣ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಶಿಕ್ಷಕರು ಸಾಹಿತಿಗಳು,ಗಾಯಕರೂ ಆದ ಡಾ.ಯ.ಚಿ.ದೊಡ್ಡಯ್ಯ ರವರು ಮಾತನಾಡಿ ರಾಜರತ್ನಂ ರವರ ಮೂಲ ಹೆಸರು ರಾಜ ಅಯ್ಯಂಗಾರ್ ಎಂದು 1909 ರಲ್ಲಿ ಅಂದಿನ ಕ್ಲೋಸ್ ಪೇಟ್(ಇಂದಿನ ರಾಮನಗರ) ದಲ್ಲಿ ಜನಿಸಿ ನಂತರ ಶಾಲಾ ದಿನಗಳಲ್ಲಿ ರಾಜರತ್ನಂ ಎಂದು ಹೆಸರು ಬದಲಾಯಿಸಿಕೊಂಡರು. ಮೂಲತಃ ಮಾತೃ ಭಾಷೆ ತಮಿಳು ಭಾಷಿಕರಾಗಿದ್ದರೂ ಕನ್ನಡದ ಬಗ್ಗೆ ಅಗಾಧ ಒಲವು.
ರತ್ನನ ಪದಗಳು ಜಗದ್ವಿಖ್ಯಾತಗೊಂಡಿವೆ. ಒಂದು ಎರಡು ಬಾಳೆಲೆ ಹರಡು, ಬಣ್ಣದ ತಗಡಿನ ತುತ್ತೂರಿ, ಪದ್ಯಗಳು ಜನಜನಿತ. ಬರಹಗಾರರಾಗಿ, ಪ್ರಾಧ್ಯಾಪಕರಾಗಿ ಪತ್ರಿಕೋದ್ಯಮಿಯಾಗಿ ಹಲವಾರು ರಂಗಗಳಲ್ಲಿ ತೊಡಗಿಸಿಕೊಂಡಿದ್ದ ರಾಜರತ್ನಂ ರವರು ಚತುರ್ಭಾಷಾ ಕವಿಗಳಾಗಿದ್ದರು. ಮೈಸೂರು ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದರು. ಮಡಿಕೇರಿಯಲ್ಲಿ 1950 ರಲ್ಲಿನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಗುಂಡ್ಲುಪಂಡಿತ ಮನೆತನದವರಾಗಿದ್ದು ಗುಂಡ್ಲುಪಂಡಿತ ರಾಜರತ್ನಂ ಎಂದೇ ಖ್ಯಾತಿಯಾದರು.
ನರಕಕ್ಕೆ ಇಳಿಸಿ ನಾಲಿಗೆ ಸೀಳ್ಸಿ ಬಾಯಿ ಹೊಲಿದಾಕ್ರುದೂನೂ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ ಎಂದು ತಮ್ಮ ಕನ್ನಡಾಭಿಮಾನವನ್ನು ಬಿಂಬಿಸಿದ ಧೀಮಂತ ವ್ಯಕ್ತಿಯಾದರು. ರತ್ನನ ಪದಗಳಿಂದ ಮತ್ತಷ್ಟು ಖ್ಯಾತಿಯಾದರು. ಮಲ್ಲೇಶ್ವರದಲ್ಲಿದ್ದ ಇವರ ಮನೆಯ ರಸ್ತೆಗೆ ಜಿ.ಪಿ.ರಾಜರತ್ನಂ ರಸ್ತೆ ಎಂದು ಹೆಸರಿಡಲಾಗಿರುವುದು ಇವರ ಸಾಧನೆಯ ಸಂಕೇತ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮತ್ತೊಬ್ಬ ಅತಿಥಿಗಳಾದ ಡಾ.ತೇಜಸ್ವಿ ಕಿರಣ್ ತುಮಕೂರಿನವರು. ಬಹುಮುಖ ಪ್ರತಿಭೆ. ಗಾಂಧಿಯ ಬಗ್ಗೆ ಕುರಿತಾದ ರಾಜರತ್ನಂ ರವರ ಕೃತಿಯ ಬಗ್ಗೆ ವ್ಯಾಖ್ಯಾನಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿಯವರ ಬಗ್ಗೆ ಸವಿಸ್ತಾರವಾಗಿ ಸರಳವಾದ ವ್ಯಕ್ತಿತ್ವ. ಅವರ ಆದರ್ಶ ಧೋರಣೆಗಳು ದೇಶಪ್ರೇಮದ ಬಗ್ಗೆ ತಿಳಿಸಿದರು. ಗಾಂಧೀಜಿರವರಿಗೆ ಮಹಾತ್ಮ ಎಂದು ರವೀಂದ್ರನಾಥ ಟಾಗೋರರವರು ಬಿರುದು ನೀಡಿದರು .ಗಾಂಧೀಜಿ ಹಾಗೂ ಬೆಂಗಳೂರಿನ ನಂಟು ವಿಶಿಷ್ಟ ವಾದುದು. ಮಕ್ಕಳಿಗೆ ಅರ್ಥವಾಗುವಂತೆ ರಾಜರತ್ನಂ ರವರು ಕೃತಿಯನ್ನು ರಚಿಸಿರುವುದಾಗಿ ತಿಳಿಸಿದರು. ಗಾಂಧೀಜಿರವರನ್ನು ರಾಜರತ್ನಂ ರವರ ಒಡನಾಟ ಬಗ್ಗೆ ತಿಳಿಸಿದರು.
ನಿವೃತ್ತ ಅರಣ್ಯಾಧಿಕಾರಿ ಶ್ರೀ.ಕೆ.ವಿ.ಲಕ್ಷ್ಮಣಮೂರ್ತಿ ರವರು ಮಾತನಾಡಿ ಕರ್ನಾಟಕ ವೀರವನಿತೆ ತುಳುನಾಡಿನ ರಾಣಿ ಅಬ್ಬಕ್ಕದೇವಿಯ ಜೊತೆ ಪಯಣ ಕೃತಿಯ 3 ನೆ ಮುದ್ರಣದ ಕುರಿತಾಗಿ ತಿಳಿಸಿದರು. ಸತತ 4 ವರ್ಷಗಳ ಪರಿಶ್ರಮದಿಂದಾಗಿ ಈ ಕೃತಿ ಹೊರಬರಲು ಸಾಧ್ಯವಾಯಿತು. ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿ ಈ ಕೃತಿ ಇರಬೇಕೆಂದು ಆಶಯ ವ್ಯಕ್ತಪಡಿಸಿದರು ಹಾಗೂ ಮಂಗಳೂರು ಬಳಿಯ ಉಳ್ಳಾಲ ಸ್ಥಳಕ್ಕೆ ಆಸಕ್ತರಿಗೆ ಭೇಟಿ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕವನ, ಗೀತಗಾಯನ ನಡೆಯಿತು.ಶ್ರೀ ವಿದ್ಯಾಗಣಪತಿ ಗಮಕ ಶಿಕ್ಷಣಾಲಯದ ಅಧ್ಯಕ್ಷರೂ, ಗಮಕಿಗಳಾದ ಶ್ರೀ.ಮಂಡ್ಯ ಹೆಚ್ ಎಸ್ ಬಾಲಸುಬ್ರಹ್ಮಣ್ಯಂ ರವರು ಮಾತನಾಡಿ ಕಾರ್ಯಕ್ರಮಕ್ಕೆ ಆಶಯ ನುಡಿಗಳನ್ನು ವ್ಯಕ್ತಪಡಿಸಿದರು. ಜಿ.ಪಿ.ರಾಜರತ್ನಂ ರವರ ಭಾವಚಿತ್ರಕ್ಕೆ ಅತಿಥಿಗಳು ಹಾಗೂ ಸಭಿಕರು ಪುಷ್ಪ ನಮನ ಸಲ್ಲಿಸಿದರು.