ಬೆಂಗಳೂರು : ಟಯರ್ ಸ್ಫೋಟಗೊಂಡ ಪರಿಣಾಮ ಪೊಲೀಸ್ ಜೀಪ್ ಪಲ್ಟಿಯಾಗಿ ತರಬೇತಿ ನಿರತ ( ಪ್ರೊಬೆಷನರಿ) ಐಪಿಎಸ್ ಅಧಿಕಾರಿಯೊಬ್ಬರು ಸಾವಿಗೀಡಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಮೃತ ಅಧಿಕಾರಿಯನ್ನು ಮಧ್ಯಪ್ರದೇಶ ಮೂಲದ ಹರ್ಷಬರ್ದನ್ ಎಂದು ಗುರುತಿಸಲಾಗಿದೆ. ಮೈಸೂರಿನ ಕೆಪಿಎನಿಂದ ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಬರುತ್ತಿದ್ದ ವೇಳೆ ಕಿತ್ತಾನೆ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದೆ.
ಹರ್ಷಬರ್ದನ್ ಅವರು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದರು.ಭಾನುವಾರ ಸಂಜೆ ಐಜಿಪಿ ಅವರನ್ನು ಭೇಟಿ ಮಾಡಿ ವರದಿ ಮಾಡಿಕೊಳ್ಳಲು ಹೊಳೆನರಸೀಪುರ ಕಡೆಯಿಂದ ಜೀಪ್ನಲ್ಲಿ ಹಾಸನ ನಗರಕ್ಕೆ ಬರುತ್ತಿದ್ದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಎನ್ನುವಷ್ಟರಲ್ಲಿ ಕಿತ್ತಾನೆಗಡಿ ಬಳಿ ಜೀಪ್ನ ಟಯರ್ ಸ್ಫೋಟಗೊಂಡಿದೆ.
ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದ್ದು, ಐಪಿಎಸ್ ಅಧಿಕಾರಿ ತಲೆಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿತ್ತು.ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವ ಸ್ಥಿತಿಯಲ್ಲೂ ಅವರು ಇರಲಿಲ್ಲ.
ಇದರ ನಡುವೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದರು. ಕ್ಷಣ ಕ್ಷಣಕ್ಕೆ ಅವರ ಸ್ಥಿತಿ ಗಂಭೀರಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.ಅಪಘಾತದಲ್ಲಿ ಚಾಲಕ ಮಂಜೇಗೌಡ ಎಂಬವರಿಗೂ ಗಾಯಗಳಾಗಿವೆ.ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.