ಚಾಮರಾಜನಗರ: ಗಡಿ ಜಿಲ್ಲೆಯ ಚಾಮರಾಜ ನಗರ ಜಿಲ್ಲಾ ಕೇಂದ್ರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ಜಾನಪದ ಸಂಭ್ರಮ ಎಂಬ ಮೊದಲ ಕಾರ್ಯಕ್ರಮವನ್ನು ಇದೇ ಜುಲೈ ೩೧ರಂದು ಹಮ್ಮಿಕೊಂಡಿದೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ಜಾನಪದ ಅಕಾಡಮಿಯ ಸದಸ್ಯ ಸಂಚಾಲಕರಾದ ಡಾ. ಉಮೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಜಿಲ್ಲಾಡಳಿತ, ಜಾನಪದ ಅಕಾಡೆಮಿ ಹಾಗೂ ಆಕಾಶವಾಣಿ ಮೈಸೂರಿ ಎಫ್.ಎಂ ೧೦೦.೬ ಸಹಯೋಗದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಮತಿಗಳ ಕರುಣಿಸೊ ಮಾದೇವ ಎಂಬ ಉಪಶೀರ್ಷಿಕೆಯೊಂದಿಗೆ ಆಯೋಜಿಸಲಾಗಿದೆ. ಜಾನಪದ ತವರೂರು ಎಂದೇ ಖ್ಯಾತಿ ಪಡೆದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಜಾನಪದ ಅಕಾಡೆಮಿಯು ಪ್ರಸಕ್ತ ಸಾಲಿನ ಮೊಟ್ಟ ಮೊದಲ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದರು.
ಚಾಮರಾಜನಗರದಿಂದ ಮೊದಲು ಗೊಂಡು ಬೀದರ್ವರೆಗೆ ಜಾನಪದ ಹಿರಿಮೆಯನ್ನು ಹೆಚ್ಚಿಸುವುದು, ಜಾನಪದ ಮೂಲಪಟ್ಟುಗಳನ್ನು ಹಾಡುವ ಕಲಾವಿದರ ಕುರಿತು ಉತ್ತೇಜನ,ಪ್ರಚಾರ ನೀಡುವ ನಿಟ್ಟಿನಲ್ಲಿ ಅಕಾಡಮಿ ಮುಂದಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಜಾನಪದ ಗಾಯಕ ಗಾಯಕಿಯರು ಹೆಚ್ಚಾಗಿದ್ದಾರೆ. ಹೀಗಾಗಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆಯನ್ನು ಜಾನಪದ ಸಂಭ್ರಮದಲ್ಲಿ ನೀಡಲಾಗಿದೆ ಎಂದು ಡಾ. ಉಮೇಶ್ ಅವರು ತಿಳಿಸಿದರು.
ಜುಲೈ ೩೧ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಬಳಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಹೊನ್ನತೇರು ಹರಿದಾವು ಎಂಬ ವಿಶೇಷ ಶೀರ್ಷಿಕೆಯಡಿ ಏರ್ಪಡಿಸಲಾಗಿರುವ ಮೆರವಣಿಗೆಗೆ ಚಾಲನೆ ನೀಡುವರು. ವೀರಗಾಸೆ, ಗಾರುಡಿ ಗೊಂಭೆ, ಗೊರವರಕುಣಿತ, ಗೊರುಕಾನ ನೃತ್ಯ, ನಗಾರಿ ಮತ್ತು ತಮಟೆ, ಪೂಜಾ ಕುಣಿತ, ಡೊಳ್ಳು ಕುಣಿತ, ಹುಲಿವೇಷ, ಬೀಸು ಕಂಸಾಳೆ, ಬೇಟೆಮಣೆ, ಲಂಬಾಣಿ ನೃತ್ಯ, ಸುಗ್ಗಿ ಕುಣಿತ, ತಮಟೆ ವಾದನ, ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ಮಧ್ಯಾಹ್ನ ೧೨ ಗಂಟೆಗೆ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಾನಪದ ಸಂಭ್ರಮದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಘನ ಉಪಸ್ಥಿತಿ ವಹಿಸುವರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಪ್ರಾಸ್ತವಿಕ ನುಡಿಗಳನ್ನಾಡುವರು. ಜಿಲ್ಲೆಯ ಶಾಸಕರು, ಇತರೆ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಹಿರಿಯ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದು ತಿಳಿಸಿದರು.
ಸಂಸ್ಕೃತಿ ಚಿಂತಕರು ಹಾಗೂ ಸಾಹಿತಿಗಳಾದ ಡಾ. ಬಂಜಗೆರೆ ಜಯಪ್ರಕಾಶ್ ಅವರು ವರ್ತಮಾನದ ತಲ್ಲಣಗಳು ಮತ್ತು ಜಾನಪದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅವ್ವ ನಿನ್ನ ದನಿ ಅಪರಂಜಿ ಶೀರ್ಷಿಕೆಯಡಿ ಜಿಲ್ಲೆಯ ಮಹಿಳಾ ಕಲಾವಿದರ ತಂಡ ಹಾಡುಗಳನ್ನು ಹಾಡಲಿದ್ದಾರೆ. ಜಿಲ್ಲೆಯ ಜಾನಪದ ಕಲಾವಿದರಿಂದ ಕೋಗಿಲೆ ಕೂಗಿದಾವೋ ಶೀರ್ಷಿಕೆಯಡಿ ಕಾರ್ಯಕ್ರಮ ಮೂಡಿಬರಲಿದೆ ಎಂದರು.ಮೌಲಿಕ, ತಾತ್ವಿಕ ಸಂದೇಶ ಹೋಗಬೇಕು ಎಂಬ ಆಶಯದೊಂದಿಗೆ ಜಿಲ್ಲಾ ಜಾನಪದಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಇದು ಎಲ್ಲಾ ಕಲಾವಿದರ ಜಿಲ್ಲಾ ಹಬ್ಬವಾಗಿದೆ. ಕಲಾವಿದರ ನೆಲವೀಡು ಚಾಮರಾಜನಗರದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆಸಾರ್ವಜನಿಕರು ಭಾಗವಹಿಸಿ ಉತ್ತೇಜನ ನೀಡಬೇಕು. ಕಲಾವಿದರಿಗೆ ಬೆಂಬಲ ಪ್ರೋತ್ಸಾಹನೀಡಬೇಕೆಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ.ಉಮೇಶ್ ಅವರು ಮನವಿ ಮಾಡಿದರು.ಸಾಹಿತಿ ಸೋಮಶೇಖರ ಬಿಸಲ್ವಾಡಿ, ಹಿರಿಯ ಜಾನಪದ ಕಲಾವಿದರಾದ ಸಿ.ಎಂ. ನರಸಿಂಹಮೂರ್ತಿ, ಮಹೇಶ್, ಲಿಂಗಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.