ದೇವನಹಳ್ಳಿ: ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಕೃಷಿ ಭೂಮಿಯ ಬಲವಂತದ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ಕಳೆದ 840 ದಿನಗಳಿಂದ ಅನಿರ್ದಿಷ್ಟ ಧರಣಿ ನಡೆಯುತ್ತಿದ್ದರೂ ರೈತರ ನ್ಯಾಯಯುತ ಆಗ್ರಹಗಳಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಇಷ್ಟೊಂದು ಸುದೀರ್ಘ ಕಾಲದ ಧರಣಿ ನಡೆಯುತ್ತಿರುವ ನಡುವೆಯೇ ಎರಡು ಹಳ್ಳಿಗಳ ರೈತರಿಗೆ ಭೂ ಸ್ವಾಧೀನ ಪ್ರಕ್ರಿಯೆಯ ನೋಟಿಸ್ ಜಾರಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಕಾ ರ್ಪೋರೇಟ್ ದಲ್ಲಾಳಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ರವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕುವಂತೆ ಆಗ್ರಹಿಸಿ, ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸುವಂತೆ ಒತ್ತಾಯಿಸಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಚನ್ನರಾಯಪಟ್ಟಣ ಹೋಬಳಿ ಆಶ್ರಯದಲ್ಲಿ, ದಿನಾಂಕ 23-07-24 ರಂದು ದೇವನಹಳ್ಳಿ ಸಂತೆ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಾಗೂ ಮುಖ್ಯಮಂತ್ರಿಗಳ ಮನೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ.
ಈ ರೈತ ಹೋರಾಟದ ಯಶಸ್ಸು ರಾಜ್ಯದ ರೈತ ಚಳವಳಿಗೆ ಒಂದು ಪ್ರತಿಷ್ಠೆಯ ವಿಷಯವಾಗಿದ್ದು ಭೂ ಸ್ವಾಧೀನದ ವಿರುದ್ಧ ಹೋರಾಡುತ್ತಿರುವ ರೈತರ ಸೋಲು -ಗೆಲುವು ರೈತ ಚಳವಳಿಯ ಸೋಲು-ಗೆಲುವು ಆಗಿದೆ. ಅದ್ದರಿಂದ ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲಾ ಸಹಭಾಗಿ ಸಂಘಟನೆಗಳ ಎಲ್ಲಾ ಮುಖಂಡರು ಹಾಗೂ ಸಾಧ್ಯವಾದಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಅಣಿ ನೆರಸಲು ಸಭೆ ತೀರ್ಮಾನಿಸಿದೆ.ಸಂಯೋಜಕರಾದ ಬಡಗಲಪುರ ನಾಗೇಂದ್ರ, ಜಿಸಿ ಬಯ್ಯಾರೆಡ್ಡಿ, ರಾಜ್ಯ ದಲಿತ ನಾಯಕರು ಮಾವಳ್ಳಿ ಶಂಕರ್ ಸೇರಿದಂತೆ ಇತರರು ಇದ್ದರು.