ಭಾರತದ ಬಾಲಕರ ಮತ್ತ ಬಾಲಕಿಯರ ತಂಡಗಳು ಹೂಸ್ಟನ್ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ನಲ್ಲಿ ಪರಾಭವಗೊಂಡಿವೆ.
ಆರನೇ ಶ್ರೇಯಾಂಕದ ಬಾಲಕರ ತಂಡ 1-2ರಿಂದ ನಾಲ್ಕನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ವಿರುದ್ಧ ಸೋಲನುಭವಿಸಿತು.ಬಾಲಕಿಯರ ತಂಡವೂ 1-2ರಿಂದ ಮೂರನೇ ಶ್ರೇಯಾಂಕದ ಮಲೇಷ್ಯಾ ತಂಡದ ವಿರುದ್ಧ ಸೋಲು ಕಂಡಿತು.ಯುವರಾಜ್ ವಾಧ್ವಾನಿ 3-2ರಿಂದ ಸಿಜೋನ್ ಓಹ್ ವಿರುದ್ಧ ಗೆಲ್ಲುವ ಮೂಲಕ ಬಾಲಕರ ತಂಡಕ್ಕೆ ಭಾನುವಾರ ಗೆಲುವಿನ ಆರಂಭ ಒದಗಿಸಿದ್ದರು. ಕಳೆದ ವಾರ ವೈಯಕ್ತಿಕ ವಿಭಾಗದಲ್ಲಿ ಕಂಚು ಗೆದ್ದಿದ್ದ ಶೌರ್ಯ ಬಾವಾ ಅವರು ಬೆಳ್ಳಿ ಪದಕ ವಿಜೇತ ಜೂ ಯಾಂಗ್ ವಿರುದ್ಧ ನಾಲ್ಕು ತೀವ್ರ ಪೈಪೋಟಿ ಗೇಮ್ಗಳಲ್ಲಿ ಸೋಲುಂಡರು.
ನಿರ್ಣಾಯಕ ಪಂದ್ಯದಲ್ಲಿ ಅರಿಹಂತ್ ಕೆ.ಎಸ್ ಅವರು ಕುನ್ ಕಿಮ್ಗೆ ಶರಣಾದರು. ಬಾಲಕಿಯರ ವಿಭಾಗದಲ್ಲಿ ಶಮೀನಾ ರಿಯಾಜ್ ಅವರು ವಿಟ್ನಿ ವಿಲ್ಸನ್ ವಿರುದ್ಧ ಸೋಲುಂಡ ನಂತರ ನಡೆದ ತೀವ್ರ ಹಣಾಹಣಿಯ ಪಂದ್ಯದಲ್ಲಿ ಅನಾಹತ್ ಸಿಂಗ್ ಅವರು 3-2ರಿಂದ ಥನುಸಾ ಉತ್ರಿಯಾನ್ ವಿರುದ್ಧ ಜಯಗಳಿಸಿದರು. ನಿರ್ಣಾಯಕ ಪಂದ್ಯದಲ್ಲಿ ಗೆಲುವಿಗಾಗಿ ಪ್ರಬಲ ಪೈಪೋಟಿ ನೀಡಿದ ನಿರುಪಮಾ ದುಬೆ ಅವರು 2-3ರಿಂದ ಡೋಯ್ಸ್ ಯೆ ಸ್ಯಾನ್ ಲಿ ಅವರಿಗೆ ಶರಣಾದರು.