ದೊಡ್ಡಬಳ್ಳಾಪುರ: ಜೆಇಇ ಮುಖ್ಯ ಪ್ರವೇಶ ಪರೀಕ್ಷೆಯಲ್ಲಿ ಜವಾಹರ್ ನವೋದಯ ವಿದ್ಯಾಲಯದ ಶೇ.90ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.ಜವಾಹರ್ ನವೋದಯ ವಿದ್ಯಾಲಯ ವಿದ್ಯಾರ್ಥಿನಿಯರಿಗಾಗಿಯೇ ಕೇಂದ್ರ ಸರ್ಕಾರವು ದಕ್ಷಣ ಫೌಂಡೇಷನ್ ಮತ್ತು ಎಸ್ಆರ್ಎಲ್ ಅಕಾಡೆಮಿಯಿಂದ ಉಚಿತ ತರಬೇತಿ ನೀಡಿತ್ತು. ಹೈದರಾಬಾದ್ ವಲಯದಿಂದ 40 ವಿದ್ಯಾರ್ಥಿನಿಯರು ತರಬೇತಿಗೆ ಆಯ್ಕೆಯಾಗಿದ್ದರು ಎಂದು ಜವಾಹರ್ ನವೋದಯ ಶಾಲೆ ಪ್ರಾಂಶುಪಾಲ ಆರ್. ಚಕ್ರವರ್ತಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜೆಇಇ ಮುಖ್ಯ ಪ್ರವೇಶ ಪರೀಕ್ಷೆ ಬರೆದ 40 ವಿದ್ಯಾರ್ಥಿಗಳಲ್ಲಿ 36 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಜೆಇಇ ಅಡ್ವಾನ್ಸ್ ಗೆ ಅರ್ಹತೆ ಪಡೆದಿದ್ದಾರೆ.ಜವಾಹರ್ ನವೋದಯ ಶಾಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ತರಬೇತಿಯಿಂದ ಅವರು ಐಐಟಿಯಲ್ಲಿ ಉತ್ತೀರ್ಣರಾಗುವ ಕನಸು ಸಾಕಾರಗೊಳ್ಳಲಿದೆ ಎಂದರು.ಎಸ್ ಆರ್ ಎಲ್ ಅಕಾಡೆಮಿ ನಿರ್ದೇಶಕ ಪಟ್ಟಾಭಿರೆಡ್ಡಿ ಮಾತನಾಡಿ, ಜವಾಹರ ನವೋದಯ ವಿದ್ಯಾಲಯದ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಎಸ್ ಆರ್ ಎಲ್ ಅಕಾಡೆಮಿ ಇದೇ ಪ್ರಥಮ ಬಾರಿಗೆ ತರಬೇತಿ ಆಯೋಜಿಸಿ ಬಡ ಕುಟುಂಬದ ವಿದ್ಯಾರ್ಥಿಗಳು ಸಾಧನೆ ಮಾಡಲು ಅವಕಾಶ ಮಾಡಿದ್ದು ನಿಜಕ್ಕೂ ಅವಿಸ್ಮರಣೀಯ.
ಈ ವಿದ್ಯಾರ್ಥಿನಿಯರ ಸಾಧನೆ ಭವಿಷ್ಯದಲ್ಲಿ ದೇಶದ ಹೆಣ್ಣು ಮಕ್ಕಳಿಗೆ ಪ್ರೇರಣೆ ಆಗಬೇಕು. ಐಐಟಿಯಲ್ಲಿ ಹೆಚ್ಚಾಗಿ ಗಂಡು ಮಕ್ಕಳು ಹೆಚ್ಚಿನ ಸಾಧನೆ ಮಾಡುತ್ತಾರೆ. ಆದರೆ ವಿದ್ಯಾರ್ಥಿನಿಯರು ಮೊದಲ ಪ್ರಯತ್ನದಲ್ಲಿ ಶೇ.90ರಷ್ಟು ಫಲಿತಾಂಶ ಪಡೆದಿರುವುದು ಶ್ಲಾಘನೀಯ ಹಾಗೂ ಸಾಧನೆ ಕೂಡ ಆಗಿದೆ.ಮುಂದೆ ನಡೆಯುವ ಅಡ್ವಾನ್ಸ್ಡ್ ಜೆಇಇ ಪರೀಕ್ಷೆಯಲ್ಲಿ ಶೇ.90ರಷ್ಟು ಫಲಿತಾಂಶದ ಮೂಲಕ ಐಐಟಿಗೆ ಆಯ್ಕೆಯ ನಿರೀಕ್ಷೆ ಸಹ ಇದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷವಾದ ಒತ್ತು ನೀಡಲಾಗುತ್ತದೆ ಎಂದರು.
ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿನಿಯರಾದ ಸೋದಿಕಾ ಹಾಗೂ ಜೀವಿತಾ ಅನುಭವ ಹಂಚಿಕೊಂಡರು.ದಕ್ಷಣ ಫೌಂಡೇಷನ್ನ ಸಂಯೋಜಕಿ ಸುನಿಷ್ಟಾ ,ಜವಾಹರ್ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲ ಜಯಕೃಷ್ಣನ್, ಅಧ್ಯಾಪಕರಾದ ಜಿ.ಪ್ರಿಯದರ್ಶಿನಿ,ಶಿವಂ ಇದ್ದರು.