ರಾಮನಗರ: ಚನ್ನಪಟ್ಟಣದ ಅಲ್ಪಸಂಖ್ಯಾತ ವಿವಿಧ ವಾರ್ಡ್ಗಳಾದ ಯಾರಬ್ ನಗರ ಸೇರಿದಂತೆ ವಿವಿಧ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ವಸತಿ ಸಚಿವ ಜಮೀರ್ ಅಹಮದ್ ಖಾನ್ ಮುಖಂಡರೊಡನೆ ರೋಡ್ ಷೋ ನಡೆಸಿ ಮತಯಾಚನೆ ಮಾಡಿದರು.
ಜೆಡಿಎಸ್ಗೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ, ಜೆಡಿಎಸ್ ನವರು ಭಾವನಾತ್ಮಕವಾಗಿ ಮತ ಕೇಳೋದು ಅವರಿಗೆ ಮೊದಲಿನಿಂದಲೂ ಬಂದಿರುವ ಬಳುವಳಿ, ಅವರು ಕೊಡುವ ಹಣ ತೆಗೆದುಕೊಳ್ಳಿ, ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೆಶ್ವರ್ ಅವರಿಗೆ ಹಾಕಿ ಎಂದರು.
ಅಲ್ಪಸಂಖ್ಯಾತ ವಾರ್ಡ್ ಗಳಲ್ಲಿರುವ ಸಮಸ್ಯೆಗಳನ್ನು ಸರ್ವೆ ಮಾಡಲಾಗಿದೆ. ಅವುಗಳನ್ನು ಬಗೆಹರಿಸಿ, ವಾರ್ಡ್ಗಳ ಅಭಿವೃದ್ಧಿ ಕಾರ್ಯ ಮಾಡಲು ನಾವೆಲ್ಲರೂ ಇದ್ದೇವೆ. ಆಗಾಗಿ ಅಲ್ಪ ಸಂಖ್ಯಾತ ಸಮುದಾಯ ಎಲ್ಲರೂ ಒಗ್ಗಟ್ಟಿನ ಪ್ರದರ್ಶನ ಮಾಡಿ ಕಾಂಗ್ರೆಸ್ಗೆ ಮತ ನೀಡಿ ಎಂದು ಸಮುದಾ ಯದ ಮತದಾರರಲ್ಲಿ ಮನವಿ ಮಾಡಿದರು.
ಜನರ ಜೋಶ್ ನೋಡಿದ್ದೇನೆ. ನಾನೂ ಕೂಡ ಇದನ್ನ ನಿರೀಕ್ಷೆ ಇಟ್ಟಿರಲಿಲ್ಲ. ೨೫ ರಿಂದ ೩೦ ಸಾವಿರ ಮತಗಳ ಅಂತರದಿAದ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ. ನಿಖಿಲ್ ಎನ್ ಡಿಎ ಅಭ್ಯರ್ಥಿ ಕುಮಾರಸ್ವಾಮಿಗೆ ಮುಸ್ಲಿಂ ವೋಟ್ ಬೇಕಿಲ್ಲ. ಅಲ್ಪಸಂಖ್ಯಾತರ ವೋಟ್ ಅವರಿಗೆ ಬೇಕಿಲ್ಲ ಅವರು ಮಾತಾಡಿರೋ ವೀಡಿಯೋ ಇದೆ.
ಯಾವ ಮುಖ ಇಟ್ಕೊಂಡು ಮುಸಲ್ಮಾನರ ವೋಟ್ ಕೇಳುತ್ತಾರೆ, ಯತ್ನಾಳ್ ಮುಸಲ್ಮಾನರು, ಗಡ್ಡ ಬಿಟ್ಟವರು, ಟೋಪಿ ಹಾಕಿದವರು ನಮ್ಮ ಹತ್ತಿರ ಬರೋದು ಬೇಡ ಅಂತ ಹೇಳಿದ್ದಾರೆ. ಮೊದಲು ಜೆಡಿಎಸ್ ನವರು ಅವರನ್ನ ಒಪ್ಪಿಸೋಕೆ ಹೇಳಿ ಬಿಜೆಪಿ ಅವರು ಮುಸಲ್ಮಾನರ ಪರವಾಗಿದ್ದೀವಿ ಅಂತ ಒಪ್ಪಿಸಲು ಹೇಳಿ. ಆಗ ಮುಸಲ್ಮಾನರು ಅವರ ಪಕ್ಷಕ್ಕೆ ವೋಟ್ ಹಾಕಲು ಚಿಂತನೆ ಮಾಡುತ್ತಾರೆ ಎಂದು ಜೆಡಿಎಸ್ ವಿರುದ್ದ ಕಿಡಿ ಕಾರಿದರು.
ಮುಸಲ್ಮಾನರಿಗೆ ಮೀಸಲಾತಿ ಕೊಟ್ಟಿದ್ದು ನಾನು ಎಂಬ ಹೆಚ್.ಡಿ. ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು ಮೀಸಲಾತಿ ಕೊಟ್ಟಿದ್ದು ಅವರಲ್ಲ. ಅದನ್ನ ವೀರಪ್ಪ ಮೊಯ್ಲಿ ಕೊಟ್ಟಿದ್ದು. ದೇವೇಗೌಡರಿಗೆ ಮನವಿ ಮಾಡ್ತೇನೆ. ಜನರನ್ನು ದಾರಿತಪ್ಪಿಸೋದು ಬೇಡ.
೧೯೯೪ ರಲ್ಲಿ ವೀರಪ್ಪ ಮೊಯ್ಲಿ ಕೊಟ್ಟಿದ್ದು. ಹಿಂದುಳಿದ ವರ್ಗಗಳ ಅಯೋಗಕ್ಕೆ ಮೀಸಲಾತಿ ಕುರಿತು ವರದಿ ಕಳುಹಿಸಿದ್ದರು. ಆಗ ಸರ್ಕಾರ ಹೊಯ್ತು. ಸರ್ಕಾರ ಹೋದ ಮೇಲೆ ದೇವೇಗೌಡರು ಬಂದ್ರು. ವೀರಪ್ಪ ಮೊಯ್ಲಿ ೬% ಗೆ ಶಿಪಾರಸ್ಸು ಮಾಡಿದ್ದರು. ಆದರೆ ದೇವೇಗೌಡರು ಕೊಟ್ಟಿದ್ದು ಕೇವಲ ೪%. ನಮಗೆ ದೇವೇಗೌಡರು ಮೋಸ ಮಾಡಿದ್ದಾರೆ. ೬% ಕೊಟ್ಟಿದ್ದ ಕಾಂಗ್ರೆಸ್ ಪಕ್ಷ ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ಗೆ ಮತ ನೀಡಿ ಎಂದರು.
ಈ ವೇಳೆ ಸಚಿವರಾದ ರಹೀಂ ಖಾನ್, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್, ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಲಪಾಡ್ ಸೇರಿದಂತೆ ಹಲವರು ಇದ್ದರು.