ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಬಿಜೆಪಿ ಶಾಸಕರು ಜೆಡಿಎಸ್ ಪಕ್ಷದ ಬಗ್ಗೆ ಮಾತಾನಾಡುವುದನ್ನು ಬಿಡಬೇಕು. ನಮ್ಮ ಪಕ್ಷಕ್ಕೂ ಒಂದು ಹೈಕಮಾಂಡ್ ಇದೆ. ಅವರು ಹೇಳಿದಂತೆ ಪಕ್ಷವನ್ನು ಮುನ್ನಡೆಸುತ್ತೇವೆ’ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ ಹೇಳಿದರು.
ತಾಲ್ಲೂಕಿನ ಶಾಕಲದೇವನಪುರದಲ್ಲಿ ಭಾನುವಾರ ನಡೆದ ಜೆಡಿಎಸ್ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ಧೀರಜ್ ಮುನಿರಾಜ್ ಅವರು ನಮ್ಮ ಪಕ್ಷದ ಆತಂರಿಕ ಹಾಗೂ ನಮ್ಮ ಜವಾಬ್ದಾರಿಗಳ ವಿಷಯದಲ್ಲಿ ಮಧ್ಯೆ ಪ್ರವೇಶ ಮಾಡುವುದನ್ನು ನಿಲ್ಲಿಸಬೇಕು. ಜೆಡಿಎಸ್ ಮುಖಂಡರಿಗೆ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪಾಠ ಹೇಳುವುದನ್ನು ಬಿಡಬೇಕು ಎಂದರು.
ಜೆಡಿಎಸ್ ಪಕ್ಷ ಎನ್ಡಿಎ ಭಾಗವಾಗಿದ್ದರೂ ನಮ್ಮ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದಕ್ಕೆ ಯಾರ ಅನುಮತಿಯ ಅಗತ್ಯವೂ ಇಲ್ಲ. ನಗರಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಹಂಚಿಕೆಯಲ್ಲಿ ಬಿಜೆಪಿಯಿಂದ ಅನ್ಯಾಯವಾಗಿದೆ. ಇದು ಮುಂದಿನ ದಿನಗಳಲ್ಲಿ ಸರಿಯಾಗಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಪಾರದರ್ಶಕ ಶ್ರಮದಿಂದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಗೆಲುವು ಸಾಧಿಸಿದರು. ಆದರೆ ಬಿಜೆಪಿ ಮುಖಂಡರು ಯಾವ ರೀತಿ ನಡೆದುಕೊಂಡರು ಎನ್ನುವ ಸತ್ಯದ ಅರಿವು ಎಲ್ಲರಿಗೂ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.
ಇತ್ತಿಚೆಗೆ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ತಾಲ್ಲೂಕಿನ ಆಡಳಿತ ಯಂತ್ರ ಕುಸಿದಿದ್ದು, ತಾಲ್ಲೂಕು ಕಚೇರಿಯ ಅವ್ಯವಸ್ಥೆ ಸಚಿವರ ಕಿವಿಗೂ ತಲುಪಿದೆ. ಕ್ಷೇತ್ರದ ಶಾಸಕರು ಏನು ಮಾಡುತ್ತಿದ್ದಾರೆ, ತಮ್ಮದೇ ಕ್ಷೇತ್ರದಲ್ಲಿನ ಇಲಾಖೆಗಳ ಅಧಿಕಾರಿಗಳನ್ನ ಸೂಕ್ತವಾದ ರೀತಿಯಲ್ಲಿ ನಿಯಂತ್ರಣ ಸಾಧಿಸಲು ವಿಫಲವಾಗಿರುವುದರಿಂದ ತಮ್ಮ ಸ್ಥಾನವನ್ನು ನಿಭಾಯಿಸಲು ಸಾದ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ನಡೆಯಲಿರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಹಾಗೂ ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿ ಸದೃಢವಾಗಿ ಪಕ್ಷ ಸಂಘಟನೆ ಮಾಡಲು ತಾಲೂಕಿನ ಎಲ್ಲಾ ಹಿರಿಯ ಮುಖಂಡರು, ಯುವ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಪಕ್ಷ ಸಂಘಟನೆ ಪ್ರಾರಂಭಿಸಲಾಗುತ್ತದೆ ಎಂದರು.
ನಂತರ ಮಾತನಾಡಿದ ಕಾಂತಾಮಣಿ ಹರೀಶ್ ಗೌಡ ಅವರು ಕಳೆದ ಐದು ವರ್ಷಗಳಿಂದ ತಾಲೂಕಿನಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನ ನಡೆಸಿಕೊಂಡುಬಂದಿದ್ದೇವೆ ಮುಂದಿನ ದಿನಗಳಲ್ಲಿ ಸಹ ಮುಂದುವರಿಸಿ ಕೊಂಡು ತಾಲೂಕಿನ ಜನರ ಸೇವೆ ಮಾಡುತ್ತೇವೆ, ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ನಮಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವ ಮೂಲಕ ನಮ್ಮ ಸರಿತಪ್ಪುಗಳನ್ನ ತಿದ್ದಬೇಕು ಎಂದರು.
ನಗರಸಭೆ ಹಿರಿಯ ಸದಸ್ಯ ಟಿ.ಎನ್. ಪ್ರಭುದೇವ್ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲುಕಂಡಿರ ಬಹುದು. ಆದರೆ ಪಕ್ಷ ತಳಮಟ್ಟದಿಂದಲೂ ಸದೃಢವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಆ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಲಭಿಸಿರಬಹುದು. ಆದರೆ ಜೆಡಿಎಸ್ ಕಾರ್ಯಕರ್ತರು ಅಧಿಕಾರಕ್ಕಾಗಿ ಮಾತ್ರ ಅಸೆ ಪಟ್ಟು ಕೆಲಸ ಮಾಡುವವರಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ಟಿಎಪಿಎಂಸಿಎಸ್ ನಿರ್ದೇಶಕ ಆನಂದ್, ಜೆಡಿಎಸ್ ಮುಖಂಡರುಗಳಾದ ಎಚ್. ಜಿ.ವಿಜಯಕುಮಾರ್, ಪ್ರಭಾಕರ್, ಎ.ನಾಗರಾಜ್, ಅಶ್ವತ್ಥನಾರಾಯಣಗೌಡ, ಚಿಕ್ಕಣ್ಣಪ್ಪ, ಬಿ.ಕೃಷ್ಣಪ್ಪ, ಚಂದ್ರಣ್ಣ, ಮುನಿರಾಜಪ್ಪ, ಗೌರೀಶ್, ಪ್ರವೀಣ್, ತಳವಾರನಾಗರಾಜ್, ನಾರಾಯಣಪ್ಪ, ನರಸಿಂಹಗೌಡ, ಜಗನ್ನಾಥಚಾರ್, ಮುನಿರಾಜು, ಇದ್ದರು.