ಕೋಲಾರ; ಬೆಂಗಳೂರು ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಕೋಲಾರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕು ಚಿನ್ನಪಲ್ಲಿ ಬಳಿ ಹತ್ತಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಮಾಜಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ಧ ಸ್ಥಳಿಯರು ಆರೋಪ ಹೊರಿಸಿದ್ದಾರೆ. ಅಲ್ಲದೆ ಸ್ಥಳೀಯರು ಹಾಗೂ ಅಂಬೇಡ್ಕರ್ ಯುವ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದಾರೆ.
ದೇವನಹಳ್ಳಿ ಜೆಡಿಎಸ್ನ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ದ ಸರ್ಕಾರಿ ಭೂಮಿ ಒತ್ತುವರಿ ಆರೋಪ ಇದಾಗಿದೆ. ಚಿನ್ನಪಲ್ಲಿ ಸರ್ವೆ ನಂ-20 ರಲ್ಲಿ ಒಂದಷ್ಟು ಜಮೀನು ಖರೀದಿ ಮಾಡಿರುವ ಅವರು ಪಕ್ಕದಲ್ಲೇ ಇರುವ ಸರ್ವೇ ನಂ.21ರಲ್ಲಿ ಇರುವ ಸರ್ಕಾರಿ ಗೋಮಾಳ ಭೂಮಿ ಮೇಲೂ ಕಣ್ಣು ಹಾಕಿದ್ದಾರೆ. ಸುಮಾರು 76 ಎಕರೆ ಗೋಮಾಳ ಭೂಮಿಯಲ್ಲಿ ಹತ್ತಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.