ಬೆಂಗಳೂರು: ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆ ಭಾಗವಾಗಿ ಭಾರತದಲ್ಲಿ ಭಯೋತ್ಪಾದ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು 9ನೇ ಆರೋಪಿ ವಿರುದ್ಧ ಬೆಂಗಳೂರು ಎನ್ಐಎ ನ್ಯಾಯಾಲಯಕ್ಕೆ ಪೂರಕ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
ಬಿಹಾರದ ಮೂಲದ ಬೇಗುಸರಾಯ್ ಮೂಲದ ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್ ವಿರುದ್ಧ ಎನ್ಐಎ ಅಧಿಕಾರಿಗಳು ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
2 ವರ್ಷಗಳ ಹಿಂದ ಬೆಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಕೆಲ ಎಲ್ಇಟಿ ಶಂಕಿತ ಉಗ್ರರನ್ನು ಬಂಧನಕ್ಕೊಳಪಡಿಸಿದ್ದರು. ಆರೋಪಿಗಳಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಎರಡು ವಾಕಿಟಾಕಿ ಸೇರಿ ಡಿಜಿಟಲ್ ಸಾಧನಗಳನ್ನು ಜಪ್ತಿ ಮಾಡಿದ್ದರು. ಬಳಿಕ ಈ ಪ್ರಕರಣದ ತನಿಖೆ ಆರಂಭಿಸಿದ್ದ ಅಧಿಕಾರಿಗಳು, ಶಂಕಿತರು ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತ್ವ ತರುವ ನಿಟ್ಟಿನಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂಬುದು ತಿಳಿದುಬಂದಿತ್ತು.
ಶಂಕಿತ ಉಗ್ರ ವಿಕ್ರಮ್ ಕುಮಾರ್ 2017-18ನೇ ಸಾಲಿನಲ್ಲಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಈ ವೇಳೆ ಅದೇ ಜೈಲಿನಲ್ಲಿ ಜೀವಾವಧಇ ಶಿಕ್ಷೆ ಅನುಭವಿಸುತ್ತಿರುವ ಉಗ್ರ ನಾಸೀರ್’ಗೆ ಆತ್ಮೀಯನಾಗಿದ್ದ. ಆಗ ವಿಕ್ರಮ್ ನನ್ನು ನಾಸಿರ್ ಇಸ್ಲಾಂ ಮೂಲಭೂತದೆಡೆ ಸೆಳೆದಿದ್ದ, ಕೊಲೆ ಕೇಸಲ್ಲಿ ಜಾಮೀನು ಪಡೆದಿದ್ದ ವಿಕ್ರಮ್ ನಂತರ ತಲೆಮರೆಸಿಕೊಂಡಿರುವ ಆರೋಪಿ ಜುನೈದ್ ಅಹ್ಮದ್ ಜೊತೆ ಸಂಪರ್ಕದಲ್ಲಿದ್ದ ಎಂದು ಎನ್ಐಎ ತಿಳಿಸಿದೆ.
ಮೇ 2023 ರಲ್ಲಿ, ಜುನೈದ್ನ ಸೂಚನೆಗಳ ಮೇರೆಗೆ, ವಿಕ್ರಮ್ ಹರಿಯಾಣದ ಅಂಬಾಲದಿಂದ ಹ್ಯಾಂಡ್ ಗ್ರೆನೇಡ್ಗಳು ಮತ್ತು ವಾಕಿ-ಟಾಕಿಗಳನ್ನು ಹೊಂದಿರುವ ಪಾರ್ಸೆಲ್ ಅನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿರುವ ಇತರ ಆರೋಪಿಗಳಿಗೆ ತಲುಪಿಸಿದ್ದ. ಇದಕ್ಕೆ ಜುನೈದ್ ಫಂಡಿಂಗ್ ಮಾಡಿದ್ದ ಎಂದು ಹೇಳಿದೆ.
ತಲೆಮರೆಸಿಕೊಂಡಿರುವ ಜುನೈದ್ ಸೇರಿ 2024ರ ಜನವರಿಯಲ್ಲಿ ಎಂಟು ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತು. ಸದ್ಯ ತನಿಖೆ ಮುಂದುವರೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.