ಬಳ್ಳಾರಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಮ್ಮನ್ನು ಕೇವಲವಾಗಿ ನಡೆಸಿಕೊಂಡಿದ್ದು, ಬಹಳ ಅಪಮಾನ ಮಾಡಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ. ವಿಜಯನಗರದ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸಿ ನಮ್ಮನ್ನು ಅಪ್ಪಿಕೊಳ್ಳುವ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ ಎಂದೂ ಹೇಳಿದ್ದಾರೆ.
ಜನವರಿ 16ರಿಂದ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಪಂಚಮಸಾಲಿ ಜಾಗೃತಿ ಸಭೆ ನಡೆಸಲಾಗುವುದು. ಮುಂದಿನ 3 ವರ್ಷ ಹೋರಾಟದ ಮೂಲಕ ಜಾಗೃತಿ ಮೂಡಿಸುತ್ತೇವೆ ಎಂದು ಅವರು ಹೇಳಿದರು.
2ಎ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ಮಾಡಿದರೆ ನಮ್ಮ ಮೇಲೆ ಲಾಠಿಚಾರ್ಜ್ ಮಾಡಿಸಿದರು. ಸಿಎಂ ಸಿದ್ದರಾಮಯ್ಯ ಸರ್ಕಾರ ನಮ್ಮ ಮೇಲೆ ಲಾಠಿಚಾರ್ಜ್ ಮಾಡಿದೆ. ಕಾಂಗ್ರೆಸ್ ಪಕ್ಷ ಪಂಚಮಸಾಲಿ ಸಮಾಜಕ್ಕೆ ಬಹಳ ಅಪಮಾನ ಮಾಡಿದೆ. ಲಾಠಿಚಾರ್ಜ್ ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರ ಈವರೆಗೆ ಪಂಚಮಸಾಲಿಗಳ ಕ್ಷಮೆ ಕೇಳಿಲ್ಲ. ಮೀಸಲಾತಿ ಕೊಡಲು ಆಗಲ್ಲ ಎಂದು ಸಿಎಂ ನೇರವಾಗಿ ಹೇಳಿದ್ದಾರೆ. ನಮ್ಮನ್ನು ಅಪ್ಪಿಕೊಳ್ಳುವ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ಪ್ರತಿಭಟನಾನಿರತರ ಮೇಲೆ ಲಾಠಿಚಾರ್ಜ್ ಮಾಡಲಾಗಿತ್ತು. ನಂತರ ಸರ್ಕಾರ ಆ ಬಗ್ಗೆ ಸಮರ್ಥನೆ ಮಾಡಿಕೊಂಡಿತ್ತು.
ಲಾಠಿ ಚಾರ್ಜ್ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಂದ ಮಾಹಿತಿ ಪಡೆದಿದ್ದ ಸಿದ್ದರಾಮಯ್ಯ, ನೀವು ಮಾಡಿದ್ದು ಸರಿ ಇದೆ ಎಂದಿದ್ದರು. ಪ್ರತಿಭಟನೆ ವೇಳೆ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ. ಅದಕ್ಕಾಗಿ ಲಾಠಿಚಾರ್ಜ್ ಮಾಡಲಾಯಿತು ಎಂಬ ಜಿಲ್ಲಾಧಿಕಾರಿ ಮಾಹಿತಿಗೆ ಪ್ರತಿಕ್ರಿಯಿಸಿ, ಆದೇಶ ಪಾಲನೆ ಮಾಡಿದ್ದು ಒಳ್ಳೆಯದಾಯಿತು ಎಂದಿದ್ದರು. ನಂತರ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕೆಂದು ಪಂಚಮಸಾಲಿ ಮುಖಂಡರು ಆಗ್ರಹಿಸಿದ್ದರು. ಆದರೆ ಸಿದ್ದರಾಮಯ್ಯ ಕ್ಯಾರೇ ಅಂದಿರಲಿಲ್ಲ. ಇದು ಪಂಚಮಸಾಲಿ ಸಮಾಜದ ಮುಖಂಡರನ್ನು ಮತ್ತಷ್ಟು ಕೆರಳಿಸಿತ್ತು.