ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ಮಾಡು ಮುನ್ನ ಎಲ್ಲಾ ನಿರ್ಮಾಣ ಸಂಸ್ಥೆಗಳು ಅರಣ್ಯ ಕಾಯಿದೆಯ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೊಸದಾಗಿ ಆಯ್ಕೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ಅಧ್ಯಕ್ಷ ಎಂ ನರಸಿಂಹಲು ಹೇಳಿದ್ದಾರೆ. ಇದು ಟಾಕ್ಸಿಕ್ ಚಿತ್ರದ ಪ್ರಭಾವ ಎಂದು ಕರೆಯಲಾಗಿದೆ.
ಡಿಸೆಂಬರ್ 14 ರಂದು ಕೆಎಫ್ಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ನರಸಿಂಹುಲು ಅವರು, ಅರಣ್ಯ ಮತ್ತು ಜೀವವೈವಿಧ್ಯದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಉದ್ದೇಶಿಸಿರುವ ಎಲ್ಲಾ ಚಲನಚಿತ್ರಗಳ ತಂಡಗಳು ಅರಣ್ಯ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಮತ್ತು ಅದರ ಪ್ರತಿಯನ್ನು ಫಿಲ್ಮ್ ಚೇಂಬರ್ಗೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡುವಾಗ ಪ್ರೊಡಕ್ಷನ್ ಹೌಸ್ಗಳು ಎಚ್ಚರಿಕೆ ವಹಿಸಬೇಕು. ಭವಿಷ್ಯದಲ್ಲಿ ಯಾವುದೇ ವಿವಾದವನ್ನು ತಪ್ಪಿಸಲು, ಫಿಲ್ಮ್ ಚೇಂಬರ್ ಸದಸ್ಯರಿಗೆ ಅರಣ್ಯ ಇಲಾಖೆಯಿಂದ ಅನುಮತಿಯ ಪ್ರತಿಯನ್ನು ಒದಗಿಸುವಂತೆ ಸೂಚಿಸಲಾಗುವುದು. ಸಸ್ಯ ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಮತ್ತು ಚಿತ್ರ ತಂಡವು ಯಾವುದೇ ಕಾನೂನು ತೊಂದರೆಗೆ ಸಿಲುಕದಂತೆ ನೋಡಿಕೊಳ್ಳುವುದು ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ನಿರ್ಮಾಪಕರು, ನಿರ್ದೇಶಕರು ಮತ್ತು ಪ್ರದರ್ಶಕರು ಸೇರಿದಂತೆ ಕೆಎಫ್ಸಿಸಿ ಸದಸ್ಯರು ಚಿತ್ರೀಕರಣದ ಮೊದಲು ಮತ್ತು ನಂತರ ಶೂಟಿಂಗ್ ಸ್ಥಳದ ಫೋಟೋ ಪ್ರತಿಗಳನ್ನು ಚೇಂಬರ್ಗೆ ಸಲ್ಲಿಸಬೇಕು. ಇದರಿಂದ ಎದುರಾಗಬಹುದಾದ ತೊಂದರೆ ತಪ್ಪಿಸಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಗೂ ಮುನ್ನ ಈ ವಿಚಾರ ಪ್ರಸ್ತಾಪಿಸಲು ಮುಂದಾಗಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ನಿರ್ಮಾಣ ತಂಡದ ವಿರುದ್ಧ ಇತ್ತೀಚೆಗೆ ಶೂಟಿಂಗ್ಗಾಗಿ ಮರಗಳನ್ನು ಕಡಿದಿದ್ದಕ್ಕಾಗಿ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ನಗರ ಸಂರಕ್ಷಣಾಧಿಕಾರಿ ವಿಜಯ್ ನಿಶಾಂತ್ ಮಾತನಾಡಿ, ಕಾನೂನು ಈಗಾಗಲೇ ಅಸ್ತಿತ್ವದಲ್ಲಿದ್ದು, ತು ತುಂಬಾ ಕಠಿಣವಾಗಿದೆ. ನೂತನ ಕೆಎಫ್ಸಿಸಿ ಅಧ್ಯಕ್ಷರ ಈ ನಡೆ ಜೀವ ವೈವಿಧ್ಯತೆಗೆ ಧಕ್ಕೆಯಾಗದಂತೆ ಸಂರಕ್ಷಿಸಲಿದೆ ಎಂದಿದ್ದಾರೆ. ಈ ಕ್ರಮವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಸ್ವಾಗತಿಸಿದ್ದಾರೆ. ಅರಣ್ಯದಲ್ಲಿ ಯಾರೇ ಸಿನಿಮಾ ಚಿತ್ರೀಕರಣ ಮಾಡುವುದಿದ್ದರೂ ಅವರು ಹಣ ಪಾವತಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.ಟಾಕ್ಸಿಕ್ ಚಿತ್ರದ ಶೂಟಿಂಗ್ನಲ್ಲಿ ವಿವಾದ ಉಂಟಾಗಿದ್ದರಿಂದ, ಚಿತ್ರೀಕರಣ ಪೂರ್ಣಗೊಳ್ಳುವವರೆಗೆ ಕ್ಷೇತ್ರ ಪರಿಶೀಲನೆ ನಡೆಸುವಂತೆ ರೇಂಜರ್ಗಳಿಗೆ ತಿಳಿಸಲಾಗುವುದು ಮತ್ತು ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗುವುದು ಎಂದಿದ್ದಾರೆ.