ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಮೂರು ವಿಧಾನಸಭಾ ಚುನಾವಣೆಗಳಿಗೆ ಸಂಬಂಧಪಟ್ಟಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ಈಗಾಗಲೇ ಎನ್ಡಿಎ ಪ್ರಮುಖ ಮಿತ್ರಪಕ್ಷವಾದ ಬಿಜೆಪಿ ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರಗಳಲ್ಲಿ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ, ಜೆಡಿಎಸ್ ಇನ್ನು ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಕಾಂಗ್ರೆಸ್ ಪಕ್ಷದ ವತಿಯಿಂದ ಮೂರು ಕ್ಷೇತ್ರಗಳಿಗೆ ಇದುವರೆಗೂ ಯಾವುದೇ ಅಭ್ಯರ್ಥಿ ಘೋಷಣೆಯಾಗದಿದ್ದರು ಸಂಡೂರು ಕ್ಷೇತ್ರದಿಂದ ಸಂಸದ ತುಕಾರಂ ಪತ್ನಿ ಅನ್ನಪೂರ್ಣ ಅವರನ್ನು ಕಣಕ್ಕಿಳಿಸುವುದಾಗಿ ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಆಶ್ಚರ್ಯಕರವೆಂದರೆ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿರುವ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಇದುವರೆಗೂ ಕಾಂಗ್ರೆಸ್ ಜೆಡಿಎಸ್ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.
ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಸಿ.ಪಿ. ಯೋಗೇಶ್ವರ್ ತಮ್ಮ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ ಎಂಬ ನಿಲುವು ತಾಳಿದ್ದಾರೆ.ಆದರೆ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಒಂದೆಡೆ ಯೋಗೇಶ್ವರ್ ಇಂದು ತಮ್ಮ ಬೆಂಬಲಿಗರ ಸಭೆ ನಡೆಸುತ್ತಿದ್ದು, ಸಂಜೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಬೆಂಗಳೂರಿನಲ್ಲಿ ತಿಳಿಸಿ ಗುರುವಾರ ತಮ್ಮ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಚನ್ನಪಟ್ಟಣದಲ್ಲಿ ಹೇಳಿದ್ದಾರೆ.
ಯೋಗೇಶ್ವರ್ ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಪಕ್ಷ ಸೇರ್ಪಡೆಯಾಗಬಹುದು ಎಂದಿರುವುದು ಯೋಗೇಶ್ವರ್ ಕಾಂಗ್ರೆಸ್ ಸೇರುವ ಬಗ್ಗೆಸುಳಿವು ನೀಡಿದಂತಾಗಿದೆ ಎಂದು ವ್ಯಾಖ್ಯಾನಗಳು ಕೇಳಿಬರುತ್ತಿವೆ.
ಒಂದು ವೇಳೆ ಕಾಂಗ್ರೆಸ್ಗೆ ಯೋಗೇಶ್ವರ್ ಬಂದು ಪಕ್ಷದಿಂದ ಸ್ಪರ್ಧೆ ಮಾಡದೇ ಹೋದಲ್ಲಿ ಪರ್ಯಾಯವಾಗಿ ಪಕ್ಷದ ಅಭ್ಯರ್ಥಿಯಾಗಲು ರಘುನಂದನ್ ರಾಮಣ್ಣ ಅವರಿಗೆ ಸೂಚನೆ ನೀಡಲಾಗಿದೆ ಎಂದು ಸಹ ಹೇಳಲಾಗುತ್ತಿದೆ.ಮತ್ತೊಂದೆಡೆ ಮಾಜಿ ಸಂಸದ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರಿಗೆ ಸ್ಪರ್ಧೆ ಮಾಡಲು ಒತ್ತಾಯ ಕೇಳಿಬರುತ್ತಿದೆ ಎಂದು ಸ್ವತಃ ಡಿ.ಕೆ.ಸುರೇಶ್ ಅವರೇ ಹೇಳಿದ್ದಾರೆ.
ಜೆಡಿಎಸ್ ವತಿಯಿಂದ ಕೇಂದ್ರ ಸಚಿವ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದು ಚನ್ನಪಟ್ಟಣದ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ಸಭೆ ನಡೆಸುತ್ತಿದ್ದು, ಸಂಜೆ ವೇಳೆಗೆ ಪಕ್ಷದ ವತಿಯಿಂದ ಅಧಿಕೃತ ಅಭ್ಯರ್ಥಿಯ ಪ್ರಕಟಣೆ ಮಾಡುವುದಾಗಿ ಹೇಳಿದ್ದಾರೆ.
ಒಟ್ಟಾರೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಗಳು ಯಾರು ಎಂಬುದು ತೀವ್ರ ಕುತೂಹಲದ ಸಂಗತಿಯಾಗಿದೆ.