ಬೆಂಗಳೂರು: ಕಾಯ್ದಿರಿಸದ ರೈಲ್ವೆ ಟಿಕೆಟ್ ವಂಚನೆ ತಪ್ಪಿಸುವ ಸಲುವಾಗಿ ಬೆಂಗಳೂರು ರೈಲ್ವೆ ವಿಭಾಗವು ಥರ್ಮಲ್ ಪ್ರಿಂಟರ್ಗಳ ಬಳಕೆಯನ್ನು ಆರಂಭ ಮಾಡಿದೆ.
ಕೆಎಸ್ಆರ್ ಬೆಂಗಳೂರು ರೈಲ್ವೇ ನಿಲ್ದಾಣದ ಮುಖ್ಯ ದ್ವಾರದಲ್ಲಿರುವ ಎರಡು ಕೌಂಟರ್ಗಳಲ್ಲಿ 2 ಥರ್ಮಲ್ ಪ್ರಿಂಟರ್ಗಳ ಬಳಕೆಯನ್ನು ಭಾನುವಾರದಿಂದ ಆರಂಭಿಸಲಾಗಿದ್ದು, ಕೆಆರ್ ಪುರಂ, ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಯಶವಂತಪುರದ ರೈಲು ನಿಲ್ದಾಣಗಳಲ್ಲೂ ಇಂದಿನಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂ ರೈಲ್ವೇ ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಎವಿ ಕೃಷ್ಣ ಚೈತನ್ಯ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ, ಪ್ರಿಂಟಿಂಗ್ ಯಂತ್ರಗಳನ್ನು ಬಳಸಿಕೊಂಡು ಕಾಯ್ದಿರಿಸದ ಟಿಕೆಟ್ಗಳನ್ನು ನಕಲು ಮಾಡುವ ಬೆಳವಣಿಗೆಗಳು ಹೆಚ್ಚಾಗಿವೆ. ಉತ್ತರ ಭಾರತದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇದಕ್ಕೆ ಕಡಿವಾಣ ಹಾಕುವಂತೆ ರೈಲ್ವೇ ಇಲಾಖೆ ದೇಶದ ಎಲ್ಲಾ ವಲಯಗಳಿಗೆ ನಿರ್ದೇಶನ ನೀಡಿತ್ತು. ಆದ್ದರಿಂದ, ಥರ್ಮಲ್ ಪ್ರಿಂಟರ್ಗಳ ಬಳಕೆ ಮಾಡಲು ನಿರ್ಧರಿಸಿದ್ದೇವೆ. ಧರ್ಮಲ್ ಪ್ರಿಂಟರ್ ಗಳಿಂದ ಟಿಕೆಟ್ಗಳನ್ನು ನಕಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಥರ್ಮಲ್ ಪ್ರಿಂಟರ್ಗಳಲ್ಲಿ ಶಾಖ ಸಂವೇದಕಗಳನ್ನು ಬಳಸಿ ಟಿಕೆಟ್ಗಳನ್ನು ನೀಡಲಾಗುತ್ತದೆ. “ಪ್ರತಿ ಟಿಕೆಟ್ಗೆ ವಿಶಿಷ್ಟವಾದ QR ಕೋಡ್ ಅನ್ನು ರಚಿಸಲಾಗುತ್ತದೆ, TTE ಗಳು ಯಾವುದೇ ಟಿಕೆಟ್ ಅನ್ನು ಯಾದೃಚ್ಛಿಕವಾಗಿ ಪರಿಶೀಲಿಸಲು, ಅಪ್ಲಿಕೇಶನ್ ಅನ್ನು ಬಳಸಿಕೊಂಡು ಪರಿಶೀಲನೆ ಮಾಡಬಹುದು. ಪ್ರಸ್ತುತ ಬಳಕೆಯಲ್ಲಿರುವ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ ಗಳು ಟಿಕೆಟ್ ನೀಡಲು 20 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಥರ್ಮಲ್ ಪ್ರಿಂಟರ್ ಗಳು ಕೇವಲ 3 ಸೆಕೆಂಡುಗಳಲ್ಲಿ ಟಿಕೆಟ್ ನೀಡಲಿವೆ. ಪ್ರಕ್ರಿಯೆಯು ಹೆಚ್ಚು ವೇಗವಾಗಿರುತ್ತದೆ, ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕ ಮುದ್ರಕಗಳ ವಿಷಯಕ್ಕೆ ಬಂದರೆ, ಇವುಗಳು 1,000 ಟಿಕೆಟ್ಗಳನ್ನು ಮುದ್ರಿಸಿದ ನಂತರ ರಿಬ್ಬನ್ ಕಾರ್ಟ್ರಿಡ್ಜ್ ಅನ್ನು ಬದಲಾಯಿಸಬೇಕು. ಥರ್ಮಲ್ ಪ್ರಿಂಟರ್ಗಳ ವಿಷಯದಲ್ಲಿ ಹಾಗಿಲ್ಲ. ಪ್ರತಿ ಕೌಂಟರ್ ಪ್ರತಿದಿನ 52 ರೂಪಾಯಿಗಳನ್ನು ಉಳಿಸುತ್ತದೆ, ಇದು ಸ್ವಲ್ಪ ಮಿತವ್ಯಯಕಾರಿಯಾಗಿದೆ ಎಂದು ವಿವರಿಸಿದ್ದಾರೆ.
ಈ ಪ್ರಿಂಟರ್ ಗಳನ್ನು ಭಾನುವಾರದಿಂದ ಬಳಕೆ ಮಾಡಲಾಗುತ್ತಿದ್ದು, ಎರಡೂ ಪ್ರಿಂಟರ್ ಗಳು ತಲಾ 100 ಟಿಕೆಟ್ ಗಳನ್ನು ನೀಡಿವೆ. ಆರಂಭಿಕ ದಿನವಾಗಿದ್ದರಿಂದ ಸೀಮಿತ ಸಂಖ್ಯೆಯಲ್ಲಿ ಮಾತ್ರ ಟಿಕೆಟ್ ನೀಡಲಾಗಿದೆ. ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಅಕ್ಟೋಬರ್ 2025 ರ ವೇಳೆಗೆ ಎಲ್ಲಾ ವಿಭಾಗಗಳಲ್ಲೂ ಥರ್ಮಲ್ ಪ್ರಿಂಟರ್ಗಳ ಬಳಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.