ದೆಹಲಿ: ಯುವ ಬ್ಯಾಟರ್ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಬಾಂಗ್ಲಾದೇಶ ಎದುರಿನ ಎರಡನೇ ಟಿ20 ಪಂದ್ಯವನ್ನು 86 ರನ್ಗಳಿಂದ ಜಯಿಸಿತು.
ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ 2-0ಯಿಂದ ಗೆದ್ದುಕೊಂಡಿತು.ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿತೀಶ್ ರೆಡ್ಡಿ (74 ರನ್) ಆಕರ್ಷಕ ಬ್ಯಾಟಿಂಗ್ ಮಾಡಿದರು. ರಿಂಕು (53 ರನ್) ಅವರೂ ಬ್ಯಾಟಿಂಗ್ನಲ್ಲಿ ಅಬ್ಬರಿಸಿದರು. ಭಾರತ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 221 ರನ್ ಗಳಿಸಿತು.
ತಮ್ಮ ವೃತ್ತಿಜೀವನದ ಎರಡನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಡಿದ ನಿತೀಶ್ 27 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದರು. ಸರಣಿಯ ಮೊದಲ ಪಂದ್ಯದಲ್ಲಿ ಮಿಂಚಿದ್ದ ಹಾರ್ದಿಕ್ ಇಲ್ಲಿ ಮತ್ತೆ ಅಬ್ಬರಿಸಿದರು.ಕಠಿಣ ಗುರಿಯನ್ನು ಬೆನ್ನಟ್ಟಿದ ಪ್ರವಾಸಿ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 135 ರನ್ ಗಳಿಸಿತು. ತಂಡದ ಮೆಹಮುದುಲ್ಲಾ (41 ರನ್) ಹೊರತುಪಡಿಸಿ ಉಳಿದವರು ನಿರಾಸೆ ಮೂಡಿಸಿದರು. ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲಿಯೂ ಮಿಂಚಿದ ನಿತೀಶ್ 2 ವಿಕೆಟ್ ಗಳಿಸಿದರು. ವರುಣ್ ಚಕ್ರವರ್ತಿ ಕೂಡ 2 ವಿಕೆಟ್ ಪಡೆದರು.