ಕಲಬುರಗಿ: ಭಾರತದ ದೇವ್ ಜೇವಿಯಾ, ಧೀರಜ್ ಕೆ. ಹಾಗೂ ಮನೀಶ್ ಸುರೇಶಕುಮಾರ ಅವರು ಇಲ್ಲಿ ನಡೆಯುತ್ತಿರುವ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸಿದರು.
ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 7ನೇ ಶ್ರೇಯಾಂಕಿತ ದೇವ್ ಜೇವಿಯಾ ಅವರು ಮನೀಶ್ ಗಣೇಶ ವಿರುದ್ಧ 6-4, 6-3ರಿಂದ ಗೆಲುವು ಸಾಧಿಸುವ ಮೂಲಕ 2ನೇ ಸುತ್ತಿಗೆ ಪ್ರವೇಶಿಸಿದರು. ಮನೀಶ್ ಸುರೇಶಕುಮಾರ ಅವರು ಸಿದ್ಧಾಂತ್ ಬಾಂಥಿಯಾ ಅವರನ್ನು 7-6(7-4), 6-4 ಸೆಟ್ಗಳ ಅಂತರದಿಂದ ಪರಾಭವಗೊಳಿಸಿದರು.
ಇನ್ನೊಂದು ಪಂದ್ಯದಲ್ಲಿ ಧೀರಜ್ ಕೆ. ಅವರು ಕೊರಿಯಾದ ಯುನ್ಸೆಕ್ ಜಾಂಗ್ ವಿರುದ್ಧ 6-0, 3-4 ಮುನ್ನಡೆಯಲ್ಲಿದ್ದರು. ಈ ವೇಳೆ ಲೈನ್ ಅಂಪೈರಿಂಗ್ ನೀಡಿದ ತೀರ್ಪಿನ ಕುರಿತು ಯುನ್ಸೆಕ್ ಅಸಮಾಧಾನ ವ್ಯಕ್ತಪಡಿಸಿದರು. ಅಂಪೈರ್ ತಮ್ಮ ನಿರ್ಧಾರವನ್ನು ಬದಲಿಸದೇ ಇದ್ದುದರಿಂದ ಅವರು ರೆಕೆಟ್ ಎಸೆದು ಪಂದ್ಯದಿಂದ ಹೊರನಡೆದರು.
ಸಿದ್ಧಾಂತ್-ವಿಷ್ಣುವರ್ಧನ್ ಜೋಡಿ ಕ್ವಾರ್ಟರ್ಗೆ: ಡಬಲ್ಸ್ ವಿಭಾಗದಲ್ಲಿ 3ನೇ ಶ್ರೇಯಾಂಕದ ಸಿದ್ಧಾಂತ್ ಬಾಂಥಿಯಾ ಮತ್ತು ವಿಷ್ಣುವರ್ಧನ್ ಜೋಡಿಯು ರಾಘವ್ ಜೈಸಿಂಘಾನಿ ಮತ್ತು ಜಪಾನಿನ ಕಜುಕಿ ನಿಶಿವಾಕಿ ಜೋಡಿ ವಿರುದ್ಧ 6-3, 7-6(7-3)ರಿಂದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೇರಿತು.