ಶಾಂಘೈ: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಇಲ್ಲಿ ನಡೆದ ಶಾಂಘೈ ಮಾಸ್ಟರ್ಸ್ ಸೂಪರ್ 1000 ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ 24 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರನ್ನು ನೇರ ಸೆಟ್ಗಳಿಂದ ಮಣಿಸಿ ಕಿರೀಟವನ್ನು ಮುಡಿಗೇರಿಸಿಕೊಂಡರು.
ಭಾನುವಾರ ನಡೆದ ಹಣಾಹಣಿಯಲ್ಲಿ 23 ವರ್ಷ ವಯಸ್ಸಿನ ಸಿನ್ನರ್ 7-6 (7/4), 6-3ರಿಂದ ನಾಲ್ಕನೇ ಶ್ರೇಯಾಂಕದ ಸರ್ಬಿಯಾದ ಆಟಗಾರನನ್ನು ಹಿಮ್ಮೆಟ್ಟಿಸಿದರು. ಈ ಹೋರಾಟ ಕೇವಲ 1 ಗಂಟೆ 37 ನಿಮಿಷದಲ್ಲಿ ಮುಕ್ತಾಯವಾಯಿತು.ಇಟಲಿಯ ಆಟಗಾರ ಸಿನ್ನರ್ಗೆ ಇದು ಋತುವಿನ ಏಳನೇ ಪ್ರಮುಖ ಪ್ರಶಸ್ತಿಯಾಗಿದೆ. ಆಸ್ಟ್ರೇಲಿಯಾ ಓಪನ್, ಅಮೆರಿಕಾ ಓಪನ್ ಚಾಂಪಿಯನ್ ಆಗಿರುವ ಅವರು, ಎರಡು ವಾರದ ಹಿಂದೆ ಚೀನಾ ಓಪನ್ ಚಾಂಪಿಯನ್ ಆಗಿದ್ದರು.
2016ರಲ್ಲಿ ಇಂಗ್ಲೆಂಡ್ನ ಆಯಂಡಿ ಮರ್ರೆ ಒಂಬತ್ತು ಪ್ರಶಸ್ತಿ ಗೆದ್ದ ನಂತರ ಒಂದು ಋತುವಿನಲ್ಲಿ ಆರಕ್ಕೂ ಹೆಚ್ಚು ಕಿರೀಟ ಮುಡಿಗೇರಿಸಿಕೊಂಡ ಮೊದಲ ಆಟಗಾರ ಎಂಬ ಹಿರಿಮೆಗೆ ಸಿನ್ನರ್ ಪಾತ್ರವಾದರು. ಅಲ್ಲದೆ, ಜೊಕೊವಿಚ್ ವಿರುದ್ಧ ಗೆಲುವಿನ ದಾಖಲೆಯನ್ನು 4-4ಕ್ಕೆ ಸಮಗೊ ಳಿಸಿದರು.