ಚೆನ್ನೈ : ಪ್ರಮುಖ ಸ್ಪಿನ್ನರ್ ಸ್ನೇಹ್ ರಾಣಾ(8-77) ಅವರ ಐತಿಹಾಸಿಕ 8 ವಿಕೆಟ್ ಗೊಂಚಲು ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಫಾಲೋ ಆನ್ ಹೇರಿದೆ.
ಮೂರನೇ ದಿನದಾಟವಾದ ರವಿವಾರ 4 ವಿಕೆಟ್ ನಷ್ಟಕ್ಕೆ 236 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ಕೇವಲ 17 ರನ್ ಗಳಿಸುವಷ್ಟರಲ್ಲಿ 8.2 ಓವರ್ ಗಳಲ್ಲಿ ಐದು ವಿಕೆಟ್ ಗಳನ್ನು ಕಳೆದುಕೊಂಡಿತು.84.3 ಓವರ್ ಗಳಲ್ಲಿ 266 ರನ್ ಗೆ ಆಲೌಟಾಯಿತು. ಸ್ನೇಹ್ ರಾಣಾ ಇಂದು ಉರುಳಿದ 6 ವಿಕೆಟ್ ಗಳ ಪೈಕಿ ಐದನ್ನು ಕಬಳಿಸಿ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದರು.
ಒಂದೇ ಇನಿಂಗ್ಸ್ನಲ್ಲಿ ಗರಿಷ್ಟ ವಿಕೆಟ್ ಪಡೆದ ಸ್ನೇಹ್ರಾಣಾ ಅವರು ಭಾರತದ ಮಾಜಿ ಕ್ರಿಕೆಟರ್ ನೀತು ಡೇವಿಡ್ ಹಾಗೂ ಆಸ್ಟ್ರೇಲಿಯದ ಅಶ್ ಗಾರ್ಡ್ನರ್ ಸಾಧನೆಯನ್ನು ಸರಿಗಟ್ಟಿದರು.ಭಾರತದ ಮೊದಲ ಇನಿಂಗ್ಸ್ 603 ರನ್ಗೆ ಉತ್ತರವಾಗಿ ಮೊದಲ ಇನಿಂಗ್ಸ್ನಲ್ಲಿ 337 ಹಿನ್ನಡೆ ಕಂಡಿರುವ ದಕ್ಷಿಣ ಆಫ್ರಿಕಾ ತಂಡವನ್ನು ಭಾರತವು ಮತ್ತೊಮ್ಮೆ ಬ್ಯಾಟಿಂಗ್ ಗೆ ಇಳಿಸಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ಮಹಿಳಾ ತಂಡ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿದೆ. ನಾಯಕ ಲೌರಾ ವಾಲ್ವಾರ್ಟ್(ಔಟಾಗದೆ 93, 252 ಎಸೆತ, 12 ಬೌಂಡರಿ)ಕ್ರೀಸ್ ಕಾಯ್ದುಕೊಂಡಿದ್ದಾರೆ.