ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮೇಲೆ ನಂಬಿಕೆ ಇಟ್ಟು ಲಕ್ಷಾಂತರ ಶಿಕ್ಷಕರು, ಮಕ್ಕಳನ್ನು ನಿಭಾಯಿಸುವ ಮಹತ್ವದ ಶಿಕ್ಷಣ ಖಾತೆಯನ್ನು ನೀಡಿದ್ದಾರೆ,ಅದನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದೇನೆ. ಮುಖ್ಯಮಂತ್ರಿಗಳು ಕೂಡ ನಮ್ಮ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಸಮಾಜಿಕ ಜಾಲತಾಣಗಳಲ್ಲಿ ಬರುವ ಟ್ರೋಲ್ ಗಳ ಕುರಿತು ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನ ಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳ ಸಮ್ಮಿಲನ- 2024ರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಅನೇಕ ದಶಕಗಳಿಂದ ನಮ್ಮ ತಂದೆ ಬಂಗಾರಪ್ಪನವರನ್ನು ಗೆಲ್ಲಿಸಿ ರಾಜ್ಯ ಮುಖ್ಯಮಂತ್ರಿ ಮಾಡುವಲ್ಲಿ ಮತ್ತು ನನ್ನ ಎರಡು ಬಾರಿ ಗೆಲ್ಲಿಸಿ ಮಂತ್ರಿಯನ್ನಾಗಿ ಮಾಡಿದ್ದೀರಿ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ,ಯಾವುದೇ ಸಮಯದಲ್ಲಿ ಮನೆಗೆ ತಮ್ಮ ಸಮಸ್ಯೆಗಳನ್ನು ಹೊತ್ತು ತನ್ನಿ ಸಾಧ್ಯವಾದಷ್ಟು ಅದಕ್ಕೆ ಪರಿಹಾರ ಕಂಡುಕೊಡುವುದಾಗಿ ತಿಳಿಸಿದರು.
ಕಳೆದ ಒಂದೂವರೆ ವರ್ಷಗಳಿಂದ ರಾಜ್ಯ ಸರ್ಕಾರದಲ್ಲಿನ ಜನಪರ ಕಾರ್ಯಕ್ರಮಗಳಿಂದ ಸೊರಬ ತಾಲೂಕಿನ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ, ಸದ್ಯ ಸರ್ಕಾರ ದಿಂದ ಸುಮಾರು 250ಕೋಟಿ ರೂಪಾಯಿ ಹಣವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು, ಯಾವುದೇ ರಾಜಕೀಯ ಪಕ್ಷ ಬೇದ ಬಾವವಿಲ್ಲದೇ, ನಾವು ಸೋಲಲ್ಲಿ ಗೆಲ್ಲಲ್ಲಿ ಇಂತಹ ವಿಶೇಷ ಸಮ್ಮಿಲನ ಕಾರ್ಯಕ್ರಮ ಶಿವಮೊಗ್ಗ, ಸೊರಬ ತಾಲ್ಲೂಕಿನ ಬೆಂಗಳೂರಿನ ನಿವಾಸಿಗಳಿಗಾಗಿ ಪಕ್ಷಾತೀತವಾಗಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ನಟ ಶಿವರಾಜ್ ಕುಮಾರ್ ಅವರ ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖ ಲಾಗಿರುವ ಹಿನ್ನೆಲೆಯಲ್ಲಿ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಮಧು ಬಂಗಾರಪ್ಪ, ಶಿವರಾಜ ಕುಮಾರ್ ಅವರು ಆರೋಗ್ಯವಾಗಿದ್ದಾರೆ, ಸಣ್ಣ ಆರೋಗ್ಯದ ಸಮಸ್ಯೆಯಿಂದ ಚಿಕಿತ್ಸೆಗಾಗಿ ಅವರು ಅಮೆರಿಕಾಕ್ಕೆ ತೆರಳಲಿದ್ದು ಒಂದು ವಾರಗಳ ಕಾಲ ತಾವು ಅವತ ಜತೆಯಲ್ಲಿ ಇರುವುದಾಗಿ ತಿಳಿಸಿದರು.
ಬಂಗಾರಪ್ಪ ಅವರ ಹಿರಿಯ ಪುತ್ರಿ ಸುಜಾತ ತಿಲಕ್ ಕುಮಾರ್ ಮಾತನಾಡಿ, ಸಂಬಂಧ ಗಳನ್ನು ಬೆಸೆಯುವ ಇಂತಹ ಸಮ್ಮೀಲನ ಕಾರ್ಯಕ್ರಮಗಳು ನಡೆಯುತ್ತಿರಬೇಕು, ವಿಶೇಷವಾಗಿ ಮಲೆನಾಡಿನ ಕೊಟ್ಟೆ ಕಡಬು, ತೊಡೆದೊಳಗಿ,ಕಜ್ಜಾಯ, ಕೋಳಿಸಾರು, ಹೀಗೆ ವಿವಿಧ ತಿನಿಸುಗಳ ಪರಿಚಯವನ್ನು ಬೆಂಗಳೂರು ಜನತೆಗೆ ಮಾಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಸೊರಬ ನಿವಾಸಿಗಳ ಪೋಷಕರ ಮಕ್ಕಳು ನಡೆಸಿ ಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡಿತ್ತು. ಕಾರ್ಯಕ್ರಮದಲ್ಲಿ ಒಂದೂವರೆ ಸಾವಿರ ಮಂದಿಗೆ ಮಾಂಸಹಾರಿ, ಸಸ್ಯಹಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಸಮ್ಮೀಲನ 2024ರ ಕಾರ್ಯಕ್ರಮದ ಸಂಚಾಲಕರಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಏಕಾಂತಪ್ಪ, ವಕೀಲರಾದ ಕೇಶವಮೂರ್ತಿ ಹಾಲಗಳಲೆ, ಕುಮಾರಸ್ವಾಮಿ ಹೊಸೊರು,ದಯಾನಂದ ಬಿದರಗೆರೆ, ಮುಕುಂದ ಹಿರೇಇಡಗೋಡು, ಅನಿಲ್, ಗಣಪತಿ ಹಳೇ ಸೊರಬ ಮತ್ತಿತರರು ಭಾಗವಹಿಸಿದ್ದರು.