ನೆಲಮಂಗಲ: ಅಭಿನವ ಪ್ರಕಾಶನ ಪ್ರಕಟಿಸುತ್ತಿರುವ ಡಾ. ಎಚ್.ಎಸ್.ಗೋಪಾಲ ರಾವ್ ನೆನಪಿನ ಗ್ರಂಥ ಮಾಲೆಯ 3ನೆಯ ಪುಸ್ತಕವಾಗಿ ಡಾ. ವೇದಾವತಿ.ಎಸ್ ಅವರ ‘ಕಲ್ಯ: ಪರಿಚಯಾತ್ಮಕ ಅಧ್ಯಯನ’ ಕೃತಿಯನ್ನು 1-1-2025, ಬುಧವಾರದಂದು ಅರಸಿನಕುಂಟೆಯ ಗೋಪಾಲ ರಾವ್ ಅವರ ಸ್ವಗೃಹದಲ್ಲಿ ಸರಳವಾಗಿ ಬಿಡುಗಡೆ ಮಾಡಲಾಯಿತು.
ಎಚ್.ಎಸ್.ಗೋಪಾಲರಾಯರಿಗಿದ್ದ ಧೀಶಕ್ತಿಯಿಂದ ತಾವೂ ಅನುಪಮ ಸಾಹಿತ್ಯದ ಕೆಲಸ ಮಾಡಿದರು ಹಾಗೂ ಬೇರೆಯವರಿಂದಲೂ ಮಾದರಿಯ ಕೆಲಸಗಳನ್ನು ಮಾಡಿಸಿದರು ಎಂದು ಗಂಗಾ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಶ್ರೀಮತಿ ಅನುಪಮ ಲಕ್ಷ್ಮೀನರಸಿಂಹ ಅವರು ಹೇಳಿದರು.
ಅವರು ಅರಿಸಿನಕುಂಟೆಯ ಅಕ್ಷರದಲ್ಲಿ ಅಭಿನವ ಪ್ರಕಾಶನವು ಗೋಪಾಲರಾಯರ ನೆನಪಿನಲ್ಲಿ ಪ್ರತಿ ತಿಂಗಳ ಮೊದಲ ದಿನ ಹೊರತರುತ್ತಿರುವ ಗ್ರಂಥಮಾಲೆಯ ಮೂರನೆಯ ಕೃತಿ ಡಾ. ವೇದಾವತಿ.ಎಸ್ ಅವರ ‘ಕಲ್ಯ- ಒಂದು ಪರಿಚಯಾತ್ಮಕ ಅಧ್ಯಯನ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಅಭಿನವದ ನ.ರವಿಕುಮಾರ್ ಮಾತನಾಡಿ ನಮ್ಮ ಪರಂಪರೆಯಲ್ಲಿ ನೋವನ್ನು ಕಡಿಮೆ ಮಾಡಿಕೊಳ್ಳುವ ವ್ಯಕ್ತಿತ್ವ ಗಳ ಘನತೆಯನ್ನು ನಮ್ಮ ಅಂತಕರಣಕ್ಕಿಳಿಸಿ ಕೊಳ್ಳುವ ಪ್ರಯತ್ನವಾಗಿ ಆಚರಣೆಗಳನ್ನು ಮಾಡುತ್ತ ಬಂದಿದ್ದು, ಗೋಪಾಲರಾಯರ ಅಗಲಿಕೆಯಿಂದಾದ ಖಾಲಿಸ್ಥಾನವನ್ನು ತುಂಬಿಕೊಳ್ಳಲು ಪ್ರತಿ ತಿಂಗಳಿಗೊಂದರಂತೆ ಪುಸ್ತಕ ಪ್ರಕಟಿಸುವ ಯೋಚನೆ ಹೊಳೆಯಿತು ಎಂದರು.
ಗೋಪಾಲರಾಯರ ಸಾಂಸ್ಕೃತಿಕ ಕೆಲಸಗಳು ಮತ್ತು ಘನತೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವನ್ನು ಮಾಡಬೇಕಿದೆ ಎಂದರು.ಈ ಮಾಲಿಕೆಯ ಮೊದಲ ಕೃತಿಯ ಲೇಖಕರಾದ ಲಕ್ಮ್ಷಣಮೂರ್ತಿ ಅವರು ಮಾತನಾಡಿ ಕಥೆ, ಕಾದಂಬರಿ ಬರೆಯುವುದು ಸುಲಭ. ಆದರೆ ಸಂಶೋಧನಾತ್ಮಕ ಬರಹಗಳನ್ಮು ಮಾಡುವುದು ತುಂಬಾ ಕಷ್ಟ. ಅದಕ್ಕಾಗಿಯೇ ಕೆಲವರು ಮಾತ್ರ ತೊಡಗಿಸಿಕೊಳ್ಳುತ್ತಾರೆ ಎಂದರು.ಈ ಸಂದರ್ಭದಲ್ಲಿ ನೆಲಗದರನಹಳ್ಳಿಯಲ್ಲಿನ ಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಅನುಪಮ ಲಕ್ಷ್ಮೀನರಸಿಂಹ, ಲೇಖಕಿ ಡಾ. ವೇದಾವತಿ. ಎಸ್, ಅಭಿನವದ ಶ್ರೀ ನ.ರವಿಕುಮಾರ್, ಶ್ರೀ ಕೆ.ವಿ.ಲಕ್ಷ್ಮಣಮೂರ್ತಿ, ಶ್ರೀ ಪ್ರಜ್ವಲ್ ಎಲ್. ಸಿಂಹ, ಶ್ರೀ ಎನ್.ವರದರಾಜ ಶ್ರೇಷ್ಠಿ, ಗೋಪಾಲ ರಾವ್ ಕುಟುಂಬವರ್ಗದವರು ಹಾಗೂ ಮಿತ್ರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.