ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ ಡಾ. ರಂಜನ್ ಪೇಜಾವರ್ ಅವರ ಮೊತ್ತಮೊದಲ ಕಾದಂಬರಿ `ದ ಹೆವೆನ್ ಆಸ್ ಐ ಸಾ’ನ ಕನ್ನಡ ಅನುವಾದ `ಸ್ವರ್ಗ ನಾ ಕಂಡಂತೆ’, 28 ನೇ ಡಿಸೆಂಬರ್ 2024 ರಂದು ಸಂಜೆ 4. 00 ಘಂಟೆಗೆ, ಬೆಂಗಳೂರಿನ ನೃಪತುಂಗ ರಸ್ತೆಯ `ಮಿಥಿಕ್ ಸೊಸೈಟಿ ಶತಮಾನೋತ್ಸವ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ನಿಮ್ಹಾನ್ಸ್ನ ನಿವೃತ್ತ ಹಿರಿಯ ಪ್ರಾಧ್ಯಾಪಕ, ಖ್ಯಾತ ಮನೋವೈದ್ಯ ಹಾಗೂ ಲೇಖಕ ಡಾ.ಸಿ. ಆರ್.ಚಂದ್ರಶೇಖರ್ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದು `ಥಟ್ ಅಂತ ಹೇಳಿ’ ಖ್ಯಾತಿಯ ಸುಪ್ರಸಿದ್ಧ ಕ್ವಿಜ್ ಮಾಸ್ಟರ್, ಟವಿ ನಿರೂಪಕ ಹಾಗೂ ಲೇಖಕ ಡಾ. ನಾ.ಸೋಮೇಶ್ವರರು ಮುಖ್ಯ ಅತಿಥಿಗಳಾಗಿರುವರು. ಟಿವಿ ಮಾಧ್ಯಮಕ್ಕೆ ಚಿರಪರಿಚಿತರಾದ ಖ್ಯಾತ ಉದ್ಯಮಿ, ಬರಹಗಾರ ಹಾಗೂ ಸಮಾಜ ಸಂಘಟಕ ಸುಧಾಕರ ಪೇಜಾವರ್ ಅವರು ಕಾರ್ಯಕ್ರಮವನ್ನು ನಿರೂಪಿಸಲಿರುವರು.
ಹಲವು ಅಂತರಾಷ್ಟ್ರೀಯ ಮಟ್ಟದ ವ್ಯದ್ಯಕೀಯ ಜರ್ನಲ್ ಗಳಿಗೆ ಪ್ರಬಂಧಗಳನ್ನು ಮತ್ತು ಹಲವು ವೈದ್ಯಕೀಯ ಪಠ್ಯಪುಸ್ತಕಗಳನ್ನು ಬರೆದು ಖ್ಯಾತರಾಗಿರುವ ಮೂಲತಃ ಮಂಗಳೂರು ಮತ್ತು ಪೇಜಾವರದವರಾದ ವಿಶ್ವ ವಿಖ್ಯಾತ ನವಜಾತ ಶಿಶು ತಜ್ಞ ಡಾ.ರಂಜನ್ ಪೇಜಾವರ ಮೊತ್ತಮೊದಲ ಇಂಗ್ಲಿಷ್ ಕಾದಂಬರಿ `ದ ಹೆವೆನ್ ಆಸ್ ಐ ಸಾ’ . ಕೆಲಕಾಲ ಮರಣಿಸಿ ಸ್ವರ್ಗಕ್ಕೆ ಹೋಗಿ ಅಲ್ಲಿ ತಾನು ಕಂಡ ನಿರೀಕ್ಷಿತ ಮತ್ತು ಅನಿರೀಕ್ಷಿತ ವ್ಯಕ್ತಿಗಳಿಂದ , ಅವರ ಜೀವನಗಾಥೆಯಿಂದ; ಕಥಾನಾಯಕನು ಅಚ್ಚರಿಗೊಳ್ಳುವುದು, ಒಳಿತು ಕೆಡುಕು, ಪಾಪ ಪುಣ್ಯಗಳ ಕುರಿತು ಮಂಥನಕ್ಕೆ ತೊಡಗುವುದು ಈ ಕಾದಂಬರಿಯ ವಸ್ತು.
ಇಂಗ್ಲಿಷ್ ಹಾಗೂ ಕನ್ನಡದಲ್ಲಿ ತಮ್ಮ ಬ್ಲಾಗ್ ಮತ್ತು ಪತ್ರಿಕೆಗಳಲ್ಲಿ ಬೆಳಕು ಕಂಡ ಬಿಡಿ ಲೇಖನಗಳು, ಕವಿತೆ/ಕಥೆಗಳಿಂದ ನಾಡಿನ ಓದುಗರಿಗೆ ಈಗಾಗಲೇ ಚಿರಪರಿಚಿತರಾಗಿರುವ ಮೂಲತಃ ಕಾಸರಗೋಡಿನವರಾದ ಸತ್ಯಕಾಮ ಶರ್ಮಾ ಅವರು `ಕನ್ನಡದ್ದೇ ಕೃತಿ’ ಎಂಬಂತೆ ಇದನ್ನು ಅನುವಾದಿಸಿರುತ್ತಾರೆ.