ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ರಸ್ತೆ ಗುಂಡಿ ಮುಚ್ಚಿರುವ, ಮುಚ್ಚುವ ಕಾರ್ಯ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಕಳೆದ ರಾತ್ರಿ ನಗರ ಸಂಚಾರ ಮಾಡಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಸ್ಥಳೀಯ ಶಾಸಕರಾದ ಬಿಡಿಎ ಅಧ್ಯಕ್ಷರಾದ ಎನ್.ಎ ಹ್ಯಾರೀಶ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಬಿಎಂಆರ್.ಡಿ.ಎ ಆಯುಕ್ತರಾದ ರಾಜೇಂದ್ರ ಚೋಳನ್, ವಿಶೇಷ ಆಯುಕ್ತರಾದ ಡಾ. ಕೆ ಹರೀಶ್ ಕುಮಾರ್, ವಲಯ ಆಯುಕ್ತರಾದ ಸ್ನೇಹಲ್ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಜಯಮಹಲ್ ರಸ್ತೆಯಲ್ಲಿ ಡಾಂಬರೀಕರಣ ಹಾಕಿರುವುದನ್ನು ಹಾರೆ ಮೂಲಕ ಗುಣಮಟ್ಟ ಪರಿಶೀಲನೆ ನಡೆಸಿ ಗುಣಮಟ್ಟವನ್ನು ಕಾಪಾಡಿರುವುದನ್ನು ಖಾತರಿಸಿಪಡಿಸಿಕೊಂಡರು.ಟ್ರಿನಿಟಿ ಜಂಕ್ಷನ್ನಲ್ಲಿ ಡಾಂಬರೀಕರಣ ಮಾಡಲು ಮಿಲ್ಲಿಂಗ್ ಕಾಮಗಾರಿಗಳ ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿಯವರು ಟ್ರಿನಿಟಿ ಜಂಕ್ಷನ್ನಲ್ಲಿ ರಸ್ತೆ ಮೇಲ್ಮೈ ಭಾಗ ಹಾಳಾಗಿದ್ದು, ಮಿಲ್ಲಿಂಗ್ ಮಾಡುವ ಕಾರ್ಯವನ್ನು ಪರಿಶೀಲಿಸಿದರು.
ರಸ್ತೆಯ ಹದಗೆಟ್ಟಿರುವ ಭಾಗವನ್ನು ಮಿಲ್ಲಿಂಗ್ ಮಾಡಿ ಡಾಂಬರು ಅಳವಡಿಸುವುದರಿಂದ ರಸ್ತೆ ಗುಣಮಟ್ಟ ಕಾಪಾಡುವುದರ ಜೊತೆಗೆ ಹೆಚ್ಚು ಬಾಳಿಕೆ ಬರಲಿದ್ದು, ಪೂರ್ಣ ಹದಗೆಟ್ಟಿರುವ ಕಡೆ ಮಿಲ್ಲಿಂಗ್ ಮಾಡಿ ಡಾಂಬರೀಕಣ ಮಾಡಲು ಸೂಚಿಸಿದರು.ಮಿಲ್ಲಿಂಗ್ ಮಾಡಿದ್ದರಿಂದ ಬರುವ ಮಿಶ್ರಣವನ್ನ ಪುನರ್ಬಳಕೆ ಮಾಡಲು ಸಲಹೆ ಮಾಡಿದರು.
ದೊಮ್ಮಲೂರು ಮೇಲ್ಸೇತುವೆಯಲ್ಲಿ ಮೈಕ್ರೋ ಸರ್ಫೇಸಿಂಗ್ ಕಾಮಗಾರಿಯನ್ನು ಪರಿಸೀಲಿಸಿದರು. ಹದಗೆಟ್ಟಿರುವ ರಸ್ತೆ ಮೇಲ್ಮೈ ಅನ್ನು 6 ರಿಂದ 8 ಮಿ.ಮೀ ದಪ್ಪದ ಪದರವನ್ನು ಅಳವಡಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.ಲೋವರ್ ಅಗರಂ ರಸ್ತೆಯಿಂದ ಡಾಂಬರೀಕರಣದ ಪೂರ್ಣಗೊಂಡ ಕಾಮಗಾರಿಯ ಪರಿಶೀಲನೆ, ಥರ್ಮೋ ಪ್ಲಾಸ್ಟಿಕ್ ಪೇಯ್ಟಿಂಗ್ ನಲ್ಲಿ ಲೇನ್ ಮಾರ್ಕಿಂಗ್ ಮಾಡುವುದನ್ನು ಪರಿಶೀಲಿಸಿದರು.
ರಾತ್ರಿ 11.45ರ ಸುಮಾರಿಗೆ ಸದಾಶಿವನಗರದ ತಮ್ಮ ನಿವಾಸದಿಂದ ಕಾಮಗಾರಿ ಪರಿಶೀಲನೆ ಆರಂಭಿಸಿದ ಡಿಸಿಎಂ ರಾತ್ರಿ 2.30ರವರೆಗೂ ಕಾಮಗಾರಿಗಳ ತಪಾಸಣೆ ನಡೆಸಿದರು. ಮಧ್ಯದಲ್ಲಿ ಒಂದು ಕಡೆ ಲಘು ಉಪಹಾರ ಸೇವನೆ ಮಾಡಿದರು.ಅಧಿಕಾರಿಗಳು ನಡೆಸಿರುವ ಕಾಮಗಾರಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟೂ ಶೀಘ್ರ ಪೂರೈಸುವಂತೆ ತಾಕೀತು ಮಾಡಿದರು.