ಬೆಂಗಳೂರು: ನಮ್ಮ ಮೆಟ್ರೋ ಶುಕ್ರವಾರ ಹೊಸ ಮೈಲಿಗಲ್ಲನ್ನು ಸಾಧಿಸಿದೆ, ಇದು 9,20,562 ಪ್ರಯಾಣಿಕರನ್ನು ದಾಖಲಿಸಿದೆ. ಡಿಸೆಂಬರ್ 4 ರಿಂದ 6 ರವರೆಗೆ ಒಟ್ಟು 9 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ.
ಈ ಹಿಂದೆ ಆಗಸ್ಟ್ 14ರಂದು 9.17 ಲಕ್ಷ ಜನರು ಪ್ರಯಾಣಿಸಿದ್ದು ದಾಖಲೆಯಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ತೆರಳುವವರು, ಸಾಲು ಸಾಲು ರಜೆ ಇದ್ದಿದ್ದರಿಂದ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಿದ್ದರಿಂದ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸಿದ್ದರು. ಮಾದಾವರದಲ್ಲಿರುವ ಬೆಂಗಳೂರು ಇಂಟರ್ನ್ಯಾಶನಲ್ ಎಕ್ಸಿಬಿಷನ್ ಸೆಂಟರ್ (BIEC) ಮೈದಾನದಲ್ಲಿ ನಡೆದ ಪ್ರಮುಖ ಸಂಗೀತ ಕಾರ್ಯಕ್ರಮ ಮತ್ತು ಗ್ರೀನ್ ಲೈನ್ನ ಇತ್ತೀಚಿನ ವಿಸ್ತರಣೆ ಸೇರಿದಂತೆ ಹಲವಾರು ಅಂಶಗಳ ಸಂಯೋಜನೆಯಿಂದಾಗಿ ಪ್ರಯಾಣಿಕರ ಹೆಚ್ಚಳಕ್ಕೆ ಕಾರಣವಾಗಿದೆ.
ಆದರೆ, ಶುಕ್ರವಾರ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಹೊರತುಪಡಿಸಿ ಬೇರೇನು ಮಹತ್ವದ ಕಾರ್ಯಕ್ರಮ ಇಲ್ಲದೇ ಇದ್ದರೂ ಭಾರಿ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದ್ದಾರೆ. ಶುಕ್ರವಾರ ನೇರಳೆ ಮಾರ್ಗದಲ್ಲಿ 4,39,616 ಪ್ರಯಾಣಿಕರು, ಹಸಿರು ಮಾರ್ಗದಲ್ಲಿ 3,12,248 ಜನರು ಪ್ರಯಾಣಿಸಿದ್ದರೆ, 1,67,617 ಪ್ರಯಾಣಿಕರು ಇಂಟರ್ಚೇಂಜ್ ಮಾಡಿ ಎರಡೂ ಮಾರ್ಗಗಳಲ್ಲಿ ಸಂಚರಿಸಿದ್ದಾರೆ. 1,091 ಜನರು ಪೇಪರ್ ಟಿಕೆಟ್ ಬಳಸಿದ್ದಾರೆ.
ಚಲ್ಲಘಟ್ಟ-ವೈಟ್ಫೀಲ್ಡ್ ವರೆಗಿನ ನೇರಳೆ ಮಾರ್ಗ ನಗರದ ಐಟಿ ಹಬ್ ಅನ್ನು ಸಂಪರ್ಕಿಸುತ್ತದೆ. ಇದು ಐಟಿ ವಲಯದ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ತಂದಿದೆ. ಹಸಿರು ಮಾರ್ಗ ವಿಸ್ತರಣೆಗೊಂಡಿದ್ದ, ನಾಗಸಂದ್ರ-ಮಾದವಾರ ಮಾರ್ಗದಲ್ಲಿ ವಾಣಿಜ್ಯ ಸೇವೆ ಆರಂಭವಾಗಿರುವುದು.ಬಿಎಂಟಿಸಿ ಫೀಡರ್ ಬಸ್ಗಳ ಸಂಖ್ಯೆ ಹೆಚ್ಚಿಸಿರುವುದರಿಂದ ಮೆಟ್ರೋ ರೈಲು ಇಳಿದ ಕೂಡಲೇ ವಿವಿಧ ಸ್ಥಳಗಳಿಗೆ ತೆರಳಲು ಬಸ್ ಸಿಗುತ್ತಿವೆ ಹೀಗಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ನಗರದ ವಾಹನದಟ್ಟಣೆಯಲ್ಲಿ ಸಂಚರಿಸಲಾರದೇ ತೊಂದರೆ ಅನುವಭಿಸಿದವರೆಲ್ಲ ಮೆಟ್ರೊದಲ್ಲಿ ಸಂಚರಿಸಲು ಬಯಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ‘ನಮ್ಮ ಮೆಟ್ರೊ’ದಲ್ಲಿ ಪ್ರಯಾಣಿಕರ ದಾಖಲೆಯ ಪ್ರಮಾಣ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.