ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾನಿಲಯ, ಸ್ವದೇಶಿ ವಿಜ್ಞಾನ ಆಂದೋಳನ-ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ೧೮ನೇ ಕನ್ನಡ ವಿಜ್ಞಾನ ಸಮ್ಮೇಳವನ್ನು ಮುಂಬರುವ ಡಿಸೆಂಬರ್ ೧೯, ೨೦ ಹಾಗೂ ೨೧ರಂದು ಚಾಮರಾಜನಗರ ವಿಶ್ವವಿದ್ಯಾಲಯದ ಸುವರ್ಣ ಗಂಗೋತ್ರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿ ಆವರಣದಲ್ಲಿರುವ ಸಿಂಡಿಕೇಟ್ ಸಭಾಂಗಣದಲ್ಲಿAದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಹಾಗೂ ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕದ ಅಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.
ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕವು ವಿಶಿಷ್ಟ ಶೈಕ್ಷಣಿಕ ವೈಜ್ಞಾನಿಕ ಸಂಸ್ಥೆಯಾಗಿದೆ. ಕರ್ನಾಟಕ ರಾಜ್ಯ ಮತ್ತು ದೇಶದಾದ್ಯಂತ ವಿಜ್ಞಾನ, ತಂತ್ರಜ್ಞಾನ ಮತ್ತು ಭಾರತೀಯ ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡುವುದು ಸಂಸ್ಥೆಯ ಧ್ಯೇಯವಾಗಿದೆ. ಕನ್ನಡ ವಿಜ್ಞಾನ ಸಮ್ಮೇಳನದ ವೈಶಿಷ್ಟö್ಯತೆ ಎಂದರೆ ಪಾರಂಪಾರಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನ, ತಂತ್ರಜ್ಞಾನಗಳನ್ನು ಕೊಂಡೊಯ್ಯುವುದಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲ ವಿಷಯದ ಪ್ರಬಂಧಗಳನ್ನು ೧೨ ವಿಭಾಗಗಳ ಮೂಲಕ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಮಂಡಿಸಲಾಗುತ್ತದೆ ಎಂದರು.
ಕನ್ನಡ ವಿಜ್ಞಾನ ಸಮ್ಮೇಳನವನ್ನು ಕರ್ನಾಟಕದಲ್ಲಿರುವ ವಿಶ್ವವಿದ್ಯಾನಿಲ ಯಗಳು, ಡಿ. ೧೯, ೨೦, ೨೧ರಂದು ಚಾಮರಾಜನಗರ ವಿಶ್ವ ವಿದ್ಯಾನಿಲಯದಲ್ಲಿ ೧೮ನೇ ಕನ್ನಡ ವಿಜ್ಞಾನ ಸಮ್ಮೇಳನ ಆಯೋಜನೆಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆಗಳ ಸಹಯೋಗದೊಂದಿಗೆ ೨೦೦೫ ರಿಂದ ಆಯೋಜಿಸಲಾಗುತ್ತಿದ್ದು, ಇದುವರೆಗೆ ೧೭ ಸಮ್ಮೇಳನವನ್ನು ನಡೆಸಲಾಗಿದೆ. ೧೮ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಡಿಸೆಂಬರ್ ೧೯, ೨೦, ೨೧ರವರೆಗೆ ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿ ಆವರಣದಲ್ಲಿ ಆಯೋಜಿಸಲು ತುಮಕೂರಿನಲ್ಲಿ ನಡೆದ ೧೭ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ತೀರ್ಮಾನ ಕೈಗೊಳ್ಳಲಾಯಿತೆಂದು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಮಾತನಾಡಿ ಮೂರು ದಿನಗಳ ಕಾಲ ನಡೆಯುವ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ಶಿಕ್ಷಕರು, ಬೋಧಕರು, ಸಂಶೋಧಕರು, ವಿದ್ಯಾರ್ಥಿಗಳು ಎಲ್ಲರೂ ಭಾಗವಹಿಸಿ ವಿಷಯ ಮಂಡನೆ ಮಾಡಬಹುದಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಹೊಸದಾಗಿ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದೆ. ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ೧೮ನೇ ಕನ್ನಡ ವಿಜ್ಞಾನ ಸಮ್ಮೇಳನ ಆಯೋಜನೆಗೆ ದೊಡ್ಡ ಅವಕಾಶ ಸಿಕ್ಕಿರುವುದು ಸಂತಸದ ಸಂಗಿತಿಯಾಗಿದೆ ಎಂದರು.
ಸಮ್ಮೇಳನದಲ್ಲಿ ರಾಷ್ಟಿಯ, ಅಂತರಾಷ್ಟಿಯ ಹೆಸರಾಂತ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಅತ್ಯಂತ ಮಹತ್ವದ ಮಾಹಿತಿ ವಿವರಗಳನ್ನು ಒದಗಿಸುವ ವಸ್ತು ಪ್ರದರ್ಶನ ಸಹ ಏರ್ಪಾಡು ಮಾಡಲಾಗುತ್ತದೆ. ಗಣ್ಯಾತಿ ಗಣ್ಯರು, ವಿಜ್ಞಾನ ಕ್ಷೇತ್ರದ ಸಾಧಕರನ್ನು ಆಹ್ವಾನಿಸಲಾಗುತ್ತಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಅಂತಿಮವಾಗಿ ಸಮ್ಮೇಳನಕ್ಕೆ ಭಾಗವಹಿಸುವವರು ವಿವರಗಳನ್ನು ಮುಂದೆ ಒದಗಿಸಲಿದ್ದೇವೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಎಲ್ಲರಿಗೂ ಸಮ್ಮೇಳನದಲ್ಲಿ ಭಾಗವಹಿಸಲು ಮುಕ್ತವಾಗಿ ಅವಕಾಶವಿದೆ. ಇಂತಹ ಮಹತ್ವದ ಸಮ್ಮೇಳನವನ್ನು ಜಿಲ್ಲೆಯ ಜನತೆ ಸದುಪಯೋಗ ಮಾಡಿಕೊಳ್ಳಬೇಕೆಂದು ಕುಲಪತಿಗಳು ತಿಳಿಸಿದರು.
ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕದ ಅಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡಿ ಸ್ವದೇಶಿ ಮನೋಭಾವದೊಂದಿಗೆ ಆಧುನಿಕ ವಿಜ್ಞಾನಗಳ ಜೊತೆಗೆ ಪಾರಂಪಾರಿಕ ವಿಜ್ಞಾನಗಳಾದ ಮನೋ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಯೋಗ, ವೈದ್ಯಕೀಯ ಪದ್ದತಿ, ಕಲೆ, ಸಾಹಿತ್ಯ ಮತ್ತು ವಿಜ್ಞಾನಗಳ ಸಮ್ಮಿಳಿತ ಪ್ರಸರಣವೇ ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕದ ಆದ್ಯತೆಯಾಗಿದೆ. ೧೨ ವೈಜ್ಞಾನಿಕ ವಿಭಾಗಗಳಲ್ಲಿ ಪ್ರಬಂಧ ಮಂಡನೆಗೆ ಅವಕಾಶವಿದೆ ಎಂದರು.
ಪಾಣಿನೀಯಂ ವಿಭಾಗದಲ್ಲಿ ಅಷ್ಟಾಧ್ಯಾಯಿ, ಭಾಷಾ ವಿಜ್ಞಾನಗಳು ಮತ್ತು ಮಾನವಿಕಶಾಸ್ರ್ತ ವಿಜ್ಞಾನಗಳು, ಪತಂಜಲೀಯ ವಿಭಾಗದಲ್ಲಿ ಅಷ್ಟಾಂಗಯೋಗ, ಮನೋಆಧ್ಯಾತ್ಮಿಕ, ತತ್ವಶಾಸ್ತ್ರ, ದೈಹಿಕ ಶಿಕ್ಷಣ ಮತ್ತು ಮನೋವಿಜ್ಞಾನಗಳು, ಭಾರತೀಯಂ ವಿಭಾಗದಲ್ಲಿ ನಾಟ್ಯಶಾಸ್ತ್ರ, ಮಾನವಶಾಸ್ತ್ರ, ಸಮಾಜ ಮತ್ತು ಸಾಂಸ್ಕೃತಿಕ ವಿಜ್ಞಾನವನ್ನೊಳಗೊಂಡ ಕಲೆ ಮತ್ತು ಸಂಗೀತ, ಕೌಟಿಲೀಯಂ ವಿಭಾಗದಲ್ಲಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಕಾರ್ಯ ಮತ್ತು ಆಡಳಿತ ನಿರ್ವಹಣೆ ವಿಜ್ಞಾನಗಳು, ಧನ್ವಂತರೀಯ ವಿಭಾಗದಲ್ಲಿ ಆರೋಗ್ಯ, ಆಧುನಿಕ ವೈದ್ಯಕೀಯ ವಿಜ್ಞಾನ, ಆಯುರ್ವೇದ, ಸಿದ್ಧ, ಯುನಾನಿ ಮತ್ತು ಭಾರತೀಯ, ಪಾರಂಪರೀಯ ವೈದ್ಯಕೀಯ ಪದ್ಧತಿ, ಪರಾಶರೀಯಂ ವಿಭಾಗದಲ್ಲಿ ಕೃಷಿ, ರೇಷ್ಮೆ ಕೃಷಿ, ತೋಟಗಾರಿಕೆ ಮತ್ತು ಅರಣ್ಯ, ಪಶುವೈದ್ಯಕೀಯ ಮತ್ತು ಮೀನುಗಾರಿಕಾ ವಿಜ್ಞಾನಗಳು, ವಸುಂಧರೀಯ ವಿಭಾಗದಲ್ಲಿ ಭೂವಿಜ್ಞಾನ, ಪರಿಸರವಿಜ್ಞಾನ, ಜೀವಹಾಲವಿಜ್ಞಾನ ಮತ್ತು ವಿಶ್ವ ವಿಜ್ಞಾನ, ನಾಗರ್ಜುನಿಯಂ ವಿಭಾಗದಲ್ಲಿ ರಸಾಯನವಿಜ್ಞಾನ, ಜೀವವಿಜ್ಞಾನ ಮತ್ತು ಪದಾರ್ಥ ವಿಜ್ಞಾನಗಳು, ಭಾಸ್ಕರೀಯಂ ವಿಭಾಗದಲ್ಲಿ ಭೌತಿಕ, ಗಣಿತಶಾಸ್ತ್ರ ಮತ್ತು ಖಭೌತ ವಿಜ್ಞಾನಗಳು, ಭಾರದ್ವಾಜಿಯಂ ವಿಭಾಗದಲ್ಲಿ ವಾಸ್ತು ನಿರ್ಮಾಣ, ಯಂತ್ರ, ವೈಮಾಂತರಿಕ್ಷ, ಮತ್ತು ಸಾರಿಗೆವಿಜ್ಞಾನಗಳು, ಜೆ.ಸಿ. ಬೋಸೀಯಂ ವಿಭಾಗದಲ್ಲಿ ವಿದ್ಯುನ್ಯಾನ, ವಿದ್ಯುತ್, ಗ್ರೀನ್ ಎನರ್ಜಿ ಮತ್ತು ವಿದ್ಯುನ್ಮಾನ ಸಂವಹನ ವಿಜ್ಞಾನಗಳು, ವರಾಹಮಿಹಿರಂ ವಿಭಾಗದಲ್ಲಿ ಬೃಹತ್ಸಂಹಿತ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅಣುರೇಣುಮಾನ ತಂತ್ರಜ್ಞಾನ, ಆಹಾರ ತಂತ್ರಜ್ಞಾನ ಮತ್ತು ಅತೀತ ವಿಜ್ಞಾನಗಳು ಕುರಿತ ವಿಷಯಕ್ಕೆ ಸಂಬAಧಿಸಿದAತೆ ಪ್ರಬಂಧ ಮಂಡನೆಗೆ ಅವಕಾಶವಿದ್ದು, ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ವಿಜ್ಞಾನಿಗಳು, ಶಿಕ್ಷಕರು, ಅಧ್ಯಾಪಕರು, ಸಂಶೋಧಕರು, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ಅನಿವಾಸಿ ಕನ್ನಡಿಗರು ಮತ್ತು ಇತರರು ನೋಂದಾಯಿಸಿದ ಪ್ರತಿನಿಧಿಗಳಿಗೆ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸುವ ಅವಕಾಶ ಇರುತ್ತದೆ. ಓರ್ವ ಮಹಿಳಾ ವಿಜ್ಞಾನಿ, ಓರ್ವ ಯುವ ವಿಜ್ಞಾನಿ (೩೫ ವರ್ಷ ಮೀರದವರು) ಮತ್ತು ಓರ್ವ ಅತ್ಯುತ್ತಮ ಪ್ರಬಂಧಗಳನ್ನು ಶ್ಲಾಘನಾಪತ್ರ ಮತ್ತು ಬಹುಮಾನಗಳಿಗೆ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.
ಸಮ್ಮೇಳನದಲ್ಲಿ ಆಧುನಿಕ ವಿಜ್ಞಾನದ ಜೊತೆಗೆ ಪಾರಂಪಾರಿಕ ವಿಜ್ಞಾನ ಗಳಾದ ಮನೋ ಆಧ್ಯಾತ್ಮಿಕ ಮತ್ತು ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದಂತಹ ಮಹನೀಯರಿಗೆ ಭಾರತರತ್ನ ಡಾ. ಸರ್.ಎಂ. ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ, ಕರ್ನಾಟಕದ ಲಲಿತ ಕಲೆ, ಗಂಧರ್ವ ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ ಮಹನೀಯರಿಗೆ ಡಾ. ಭೀಮ್ ಸೇನ್ ಜೋಶಿ, ಸಾಂಸ್ಕೃತಿಕ ವಿಜ್ಞಾನ ಪುರಸ್ಕಾರ ಹಾಗೂ ರಸಾಯನ ವಿಜ್ಞಾನ ಮತ್ತು ವಸ್ತು ವಿಜ್ಞಾನ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿರುವ ಮಹನೀಯರಿಗೆ ಡಾ. ಸಿ.ಎನ್.ಆರ್. ರಾವ್ ವಿಜ್ಞಾನ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಗಣೇಶ್ ಕಾರ್ಣಿಕ್ ವಿವರಿಸಿದರು.
ಇದೇ ವೇಳೆ ಸಮ್ಮೇಳನದ ಬಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.
ಚಾಮರಾಜನಗರ ವಿಶ್ವ ವಿದ್ಯಾನಿಲಯದ ರಿಜಿಸ್ಟಾರ್ ಕುಲಸಚಿವರಾದ (ಮೌಲ್ಯಮಾಪನ) ಪ್ರೊ. ವೆಂಕಟರಮಣ. ಜಿ.ವಿ, ಪಿ.ಎಂ.ಇ.ಬಿ. ನಿರ್ದೇಶಕರಾದ ಡಾ. ಸಿದ್ದರಾಜು. ವಿ.ಜಿ, ಪ್ರೊ. ಮಹೇಶ್. ಆರ್, ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕದ ಉಪಾಧ್ಯಕ್ಷರಾದ ಡಾ. ಎ.ಎಂ. ಸುಧಾಕರ, ಪ್ರಧಾನ ಕಾರ್ಯದರ್ಶಿ ರಮೇಶ್. ಹೆಚ್., ಚಂದ್ರಕುಮಾರಿ, -ಇತರರು ಪತ್ರಿಕಾಗೊಷ್ಠಿಯಲ್ಲಿ ಉಪಸ್ಥಿತರಿದ್ದರು.