ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆಯನ್ನು ಮಂಗಳವಾರ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದ್ದು, ಇದನ್ನು ಉಭಯ ಸದನಗಳ ಜಂಟಿ ಸಮಿತಿಗೆ ಶಿಫಾರಸು ಮಾಡಬಹುದು.
“ಒಂದು ದೇಶ, ಒಂದು ಚುನಾವಣೆ” ಮಸೂದೆ ಎಂದು ಉಲ್ಲೇಖಿಸಲ್ಪಡುವ ಸಂವಿಧಾನ(ನೂರಾ ಇಪ್ಪತ್ತೊಂಬತ್ತನೇ ತಿದ್ದುಪಡಿ) ತಿದ್ದುಪಡಿ ಮಸೂದೆ, 2024 ಅನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ನಾಳೆ ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಸೂದೆ ಮಂಡಿಸಿದ ನಂತರ, ವ್ಯಾಪಕ ಸಮಾಲೋಚನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಶಿಫಾರಸು ಮಾಡುವಂತೆ ಮೇಘವಾಲ್ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡುವ ಸಾಧ್ಯತೆ ಇದೆ.
ವಿವಿಧ ಪಕ್ಷಗಳ ಸಂಸದರ ಸಂಖ್ಯಾಬಲದ ಆಧಾರದ ಮೇಲೆ ಜಂಟಿ ಸದನ ಸಮಿತಿಯನ್ನು ರಚಿಸಲಾಗುತ್ತದೆ.
ಲೋಕಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸಮಿತಿಯ ಅಧ್ಯಕ್ಷ ಸ್ಥಾನ ದೊರೆಯಲಿದ್ದು, ಹಲವು ಪಕ್ಷಗಳ ಸಂಸದರು ಸದಸ್ಯರಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಏಕಕಾಲಕ್ಕೆ ಹಂತ ಹಂತವಾಗಿ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದ್ದ ವರದಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕಳೆದ ವಾರ ಕೇಂದ್ರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆಗೆ ಒಪ್ಪಿಗೆ ನೀಡಲಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಇದರ ಉದ್ದೇಶವಾಗಿದೆ.