ಬೆಂಗಳೂರು: ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಡಿಸೆಂಬರ್ 28, 2024 ರಿಂದ ಜನವರಿ 5, 2025 ರ ತನಕ ಅವರೇಕಾಯಿ ಮೇಳ ನಡೆಯಲಿದ್ದು, ಬೆಳಿಗ್ಗೆ 10 ರಿಂದ ರಾತ್ರಿ10ರ ತನಕ ಅಂಗಡಿ ತೆರೆದಿರುತ್ತದೆ. ವಿಶೇಷವಾಗಿ ಸಂಜೆ 3 ರಿಂದ ರಾತ್ರಿ 10ರ ತನಕ ಮಾತ್ರ ವಿಶೇಷ ಖಾದ್ಯಗಳಾದ ದೋಸೆ, ವಡೆ ಇತ್ಯಾದಿಗಳು ದೊರೆಯುತ್ತದೆ.
ಅವರೇಕಾಯಿ ಮೇಳವನ್ನು 28 ಸಂಜೆ 6:00ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ ಮಾಡುವರು, ತಿಪಟೂರು ಶ್ರೀ ಸೋಮೇಕಟ್ಟೆ ಕಾಡಸಿದ್ಧೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಮ.ನಿ.ಪ್ರ. ಡಾ. ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ದೀಪ ಬೆಳಗಿಸುವವರು ಎಂದು ಮಾಲೀಕರಾದ ಗೀತಾ ಶಿವಕುಮಾರ್ ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ, ಶಾಸಕರಾದ ಉದಯ ಗರುಡಾಚಾರ್, ಹೆಚ್, ಸಿ ಬಾಲಕೃಷ್ಣ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಮೇಳದಲ್ಲಿ ಅವರೇಕಾಯಿಯಿಂದ ತಯಾರಾದ ಇಡ್ಲಿ. ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರಾ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ, ತಿನಿಸುಗಳು, ರುಚಿಕಟ್ಟಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ ಎಂದು ಸ್ವಾತಿ ವಿವರಿಸಿದರು.ಶುಚಿ, ರುಚಿಗೆ ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೇ ಹೆಸರು ವಾಸಿಯಾದ ವಾಸವಿ ಕಾಂಡಿಮೆಂಟ್ಸ್ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ವಿನೂತನವಾದ ಸಾಹಸ- ಪ್ರಯೋಗವನ್ನು ಮಾಡುತ್ತಿದೆ.
ಮಾಗಡಿ ತಾಲ್ಲೂಕಿನಲ್ಲಿ ರೈತರು ಬೆಳೆದ ಅವರೇಕಾಯಿಯನ್ನು ‘ವಾಸವಿ ಕಾಂಡಿಮೆಂಟ್ಸ್’ ನೇರವಾಗಿ ಖರೀದಿಸುತ್ತದೆ. ಇಲ್ಲಿ ಯಾವುದೇ ಮಧ್ಯವರ್ತಿಗಳ ಪ್ರವೇಶವಿಲ್ಲದೇ, ನೇರವಾಗಿ ಬೆಳೆಗಾರರ ಮನೆಬಾಗಿಲಿಗೇ ಹೋಗಿ ಅವರೇಕಾಯಿ ಖರೀದಿಸುವುದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಸಿಗುವ ಲಾಭಕ್ಕಿಂತ ಹೆಚ್ಚು ಮೊತ್ತ ಕೈಸೇರುತ್ತದೆ. ಎಂದರು.