ಬೆಂಗಳೂರು: 2025 ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು ನಗರ ಸಜ್ಜಾಗಿದೆ. ಡಿಸೆಂಬರ್ 31ರ ರಾತ್ರಿ ನಗರದ ಎಂಜಿ ರಸ್ತೆ, ಕೋರಮಂಗಲ, ಬ್ರಿಗೇಡ್ ರೋಡ್ಗಳಲ್ಲಿ ಹೊಸ ವರ್ಷಾಚರಣೆ ಜೋರಾಗಿರಲಿದೆ. ಈ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನಮ್ಮ ಮೆಟ್ರೋ, ಬಿಎಂಟಿಸಿ ಬಳಸುವಂತೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಎಂ.ಜಿ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ಓಡಿಸಲಿದೆ.
ಬಿಎಂಟಿಸಿ ಒಟ್ಟು 13 ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಈ ಬಸ್ಗಳು ರಾತ್ರಿ 11 ಗಂಟೆಯಿಂದ ನಸುಕಿನ ಜಾವ 2 ಗಂಟೆಯವರೆಗೆ ಸಂಚರಿಸಲಿವೆ.
ಜೊತೆಗೆ ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ, ಜಂಕ್ಷನ್ಗಳಿಂದಲೂ ಬಸ್ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ಗಳಿಂದ ಪ್ರಯಾಣಿಕರ ದಟ್ಟಣೆ ಅನುನುಗುಣವಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಿಸಲಾಗಿದೆ. ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಜನವರಿ 1 ನಸುಕಿನ ಜಾವ 2 ಗಂಟೆಗೆ ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್ನಿಂದ ಕೊನೆಯ ರೈಲು ಎಲ್ಲ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2.40ಕ್ಕೆ ಹೊರಡಲಿದೆ.
ಡಿಸೆಂಬರ್ 31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನದ ದ್ವಾರಗಳನ್ನು ಮುಚ್ಚಲಾಗುತ್ತದೆ. ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. 50 ರೂಪಾಯಿ ಮೌಲ್ಯದ ಪೇಪರ್ ಟಿಕೆಟ್ಗಳು ಮುಂಗಡವಾಗಿ ಲಭ್ಯವಿವೆ.