ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪರೀಕ್ಷೆ ನಡೆಸಲು ಇಂತಿಷ್ಟು ಎಂದು ದರ ನಿಗಧಿಪಡಿಸಲಾಗಿತ್ತಾದರೂ ಕೆಲ ಲಾಬೋರೇಟ್ಗಳಲ್ಲಿ ನಿಗದಿತ ದರಕ್ಕಿಂತ ದುಪ್ಪಟ್ಟು ಅದಕ್ಕು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳದೊಂದಿಗೆ ಕರ್ನಾಟಕ ಆರೋಗ್ಯ ಇಲಾಖೆಯು ಎನ್ಎಸ್1 ಆ್ಯಂಟಿಬಾಡಿ ಇಎಲ್ಐಎಸ್ಎ ಮತ್ತು ಐಜಿಎಂ ಆ್ಯಂಟಿಬಾಡಿ ಪರೀಕ್ಷೆಗೆ 300 ರೂ. ದರ ನಿಗದಿಪಡಿಸಿತ್ತು. ಎನ್ಎಸ್1 ಆ್ಯಂಟಿಬಾಡಿ, ಐಜಿಎಂ ಮತ್ತು ಐಜಿಜಿ ಆ್ಯಂಟಿಬಾಡಿಗಳ ಕ್ಷಿಪ್ರ ಪರೀಕ್ಷೆಗಳಿಗೆ 250 ರೂ. ನಿಗದಿಪಡಿಸಲಾಗಿದೆ.
ಡೆಂಗ್ಯೂಗೆ ಸಂಬಂಧಿಸಿದ ಕ್ಷಿಪ್ರ ಪರೀಕ್ಷೆಯು ಎನ್ಎಸ್1 ಪ್ರತಿಜನಕ, ಐಜಿಜಿ ಮತ್ತು ಐಜಿಎಂ ಆ್ಯಂಟಿಬಾಡಿಗಳನ್ನು ಪತ್ತೆ ಮಾಡುತ್ತದೆ ಮತ್ತು 1 ರಿಂದ 2 ಗಂಟೆಗಳಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ. ಇಎಲ್ಐಎಸ್ಎ ಪರೀಕ್ಷೆಯು ಜಿಜಿಎಂ ಆ್ಯಂಟಿಬಾಡಿಗಳ ಪತ್ತೆಹಚ್ಚುವಿಕೆಯಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ವರದಿ ಬರಲು ಸುಮಾರು 6 ರಿಂದ 8 ಗಂಟೆಗಳು ಅಥವಾ ಹೆಚ್ಚು ಸಮಯ ಬೇಕಾಗುತ್ತದೆ.
ಬಹುತೇಕ ಕೇಂದ್ರಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ಸಾಮಾನ್ಯವಾಗಿ 500 ರಿಂದ 1000 ರೂ. ತಗಲುತ್ತದೆ. ಇದಕ್ಕೆ ಸರ್ಕಾರ ದರಗಳನ್ನು ಮಿತಿಗೊಳಿಸಿದ ಸುಮಾರು ಒಂದು ವಾರದ ನಂತರ, ಬೆಂಗಳೂರು ನಗರದಾದ್ಯಂತ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಹೆಚ್ಚಿನ ದರ ವಿಧಿಸುತ್ತಿರುವುದು ತಿಳಿದುಬಂದಿದೆ.ಶಿವಾಜಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊರಮಾವು, ರಾಜಾಜಿನಗರ, ಜಯನಗರ, ಜೆಪಿ ನಗರ, ಕಮ್ಮನಹಳ್ಳಿ, ವೈಟ್ಫೀಲ್ಡ್, ಕಸ್ತೂರಿ ನಗರ, ಮತ್ತು ಆರ್ಆರ್ನಗರದಂತಹ ಪ್ರದೇಶಗಳ ಪ್ರಮುಖ ಲ್ಯಾಬ್ಗಳಿಗೆ ಕರೆ ಮಾಡಿದಾಗ ಹೆಚ್ಚು ದರ ವಿಧಿಸುತ್ತಿರುವುದು ತಿಳಿದುಬಂದಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಕ್ಷಿಪ್ರ ಪರೀಕ್ಷೆಗಳಿಗೆ ದರಗಳು 250 ರಿಂದ 1,500 ರೂ. ವರೆಗೆ ಮತ್ತು ಇಎಲ್ಐಎಸ್ಎ ಪರೀಕ್ಷೆ ದರವು 1,200 ರೂ. ನಿಂದ ಆರಂಭವಾಗಿ 3,000 ರೂ.ವರೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.