ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲು ಮುಂದಾಗಿರುವ ಪ್ರತಿಪಕ್ಷಗಳ ವಿರುದ್ಧ ರಣತಂತ್ರ ರೂಪಿಸಲು ಇಂದು ಬೆಳಗ್ಗೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಉಪಹಾರ ಕೂಟ ನಡೆಸಿ ಸಮಾಲೋಚಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಬೆಂಬಲದೊಂದಿಗೆ ಬಿಜೆಪಿಗೆ ಸವಾಲೆಸೆಯಲು ಸಿದ್ಧರಾಗಿದ್ದು, ಇಂದು ಬೆಳಗ್ಗೆ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಂಪುಟ ಸಹೋದ್ಯೋಗಿಗಳೊಂದಿಗೆ ಬಹಳಹೊತ್ತಿನ ಕಾಲ ಚರ್ಚೆ ನಡೆಸಿದರು.ಈ ಸಭೆ ತಮ್ಮ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭವಿಷ್ಯದಲ್ಲಿ ಯಾವುದೇ ಅನಾಹುತವನ್ನು ಎದುರಿಸುವ ಕಾರ್ಯತಂತ್ರದ ಭಾಗವಾಗಿದೆ ಎಂದು ರಾಜಕೀಯ ವಲಯದಲ್ಲಿ ನಡೆದಿದೆ.
ಉಪಹಾರ ಸಭೆಯಲ್ಲಿ ರಾಜ್ಯಪಾಲರು ಮುಡಾ ಹಗರಣದ ಬಗ್ಗೆ ಮತ್ತೆ ವರದಿ ಕೇಳಿರುವುದು ಮತ್ತು ಅವರ ಮುಂದಿನ ನಡೆ, ಕಾನೂನು ಹೋರಾಟ, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಕುರಿತು ಚರ್ಚೆ ನಡೆದಿದ್ದು, ಬಿಜೆಪಿಯವರ ಪಾದಯಾತ್ರೆಯನ್ನು ಹೇಗೆ ಮಟ್ಟಹಾಕಬೇಕು ಮತ್ತು ಅವರ ಹಗರಣಗಳ ಬಗ್ಗೆಯೂ ಪಟ್ಟಿ ಮಾಡಬೇಕು ಎನ್ನುವದರ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಿನ್ನೆ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿ, ರಾಜ್ಯದ ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಚರ್ಚಿಸಿದ್ದಾರೆ.
ಇನ್ನು ಆಗಸ್ಟ್ ೪ರಂದು ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸಲಿದ್ದು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಕೆಲ ಸಚಿವರ ಬದಲಾವಣೆ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಲಿದ್ದಾರೆ ಎನ್ನಲಾಗಿದೆ.
ತಾವು ಮುಡಾ ಹಗರಣದಲ್ಲಿ ಯಾವುದೇ ಕಾರಣಕ್ಕೂ ಭಾಗಿಯಾಗಿಲ್ಲ. ತಮ್ಮಿಂದ ಎಳ್ಳಷ್ಟು ತಪ್ಪಾಗಿಲ್ಲ. ನಿವೇಶನ ಕೋರಿ ತಾವು ಅರ್ಜಿಯೂ ಸಲ್ಲಿಸಿಲ್ಲ. ಯಾವುದೇ ದಾಖಲೆಗಳಲ್ಲಿನನ್ನ ಸಹಿಯೂ ಇಲ್ಲ. ಪ್ರಭಾವ ಬೀರಲು ನಾನು ಅಧಿಕಾರದಲ್ಲಿರಲಿಲ್ಲ. ಹಾಗಾಗಿ ನನ್ನನ್ನು ಸಿಕ್ಕಿಸಲು ನಡೆಯುತ್ತಿರುವ ಷಡ್ಯಂತ್ರಕ್ಕೆ ವಿರುದ್ಧವಾಗಿ ಕಾನೂನು ಹೋರಾಟ ಮಾಡಲು ಸಿದ್ದರಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಎಂದು ಹೇಳಲಾಗಿದೆ.ಈ ಹಿನ್ನೆಲೆಯಲ್ಲಿ ಇಂದು ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ನೀಡಿರುವ ನೋಟಿಸ್ ಸಂಬಂಧ ಮುಂದೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.