ಹುಣಸೂರು: ತಡೆಗೋಡೆ ಕಂಬದಲ್ಲಿ ಸಿಲುಕಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಮುಂಜಾನೆ ರಕ್ಷಣೆ ಮಾಡಿದ್ದಾರೆ.
ಆಹಾರ ಅರಸಿ ನಾಡಿಗೆ ಬಂದ ಕಾಡಾನೆಯೊಂದು ವಾಪಸ್ ಕಾಡಿಗೆ ತೆರಳುತ್ತಿದ್ದಾಗ ರೈಲ್ವೆ ಬ್ಯಾರಿಕೇಡ್ ಕಂಬಿಗಳ ನಡುವೆ ಸಿಲುಕಿ ಒದ್ದಾಡಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಅರಣ್ಯ ಪ್ರದೇಶದ ಹೊಸಕಟ್ಟೆ ಬಳಿ ಭಾನುವಾರ ಬೆಳಗ್ಗೆ ನಡೆಯಿತು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ವಲಯದ ಮುದಗನೂರು ಕೆರೆಯಂಚಿನಲ್ಲಿ ಅಳವಡಿಸಿದ್ದ ತಡೆಗೋಡೆ ಕಂಬಗಳಲ್ಲಿ ಸುಮಾರು 30 ವರ್ಷದ ಸಲಗವು ಸಿಲುಕಿತ್ತು. ಸ್ಥಳಕ್ಕೆ ಆಗಮಿಸಿದ್ದ ಡಿಸಿಎಫ್ ಸೀಮಾ, ಎಸಿಎಫ್ ಲಕ್ಷ್ಮಿಕಾಂತ್ ಪರಿಶೀಲನೆ ನಡೆಸಿದರು. ಜೆಸಿಬಿ ಮೂಲಕ ತಡೆಗೋಡೆಯನ್ನು ತೆರವುಗೊಳಿಸಿದ ಇಲಾಖೆಯ ಸಿಬ್ಬಂದಿ, ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಆನೆಯನ್ನು ಬಿಡುಗಡೆಗೊಳಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಜೆಸಿಬಿ ಯಂತ್ರದ ಸಹಾಯದಿಂದ ಕಾಡಾನೆಯನ್ನು ರಕ್ಷಿಸಿದರು. ಆನೆಯನ್ನು ಈ ಹಿಂದೊಮ್ಮೆ ಸೆರೆ ಹಿಡಿದಾಗ, ಚಲನವಲನ ತಿಳಿದುಕೊಳ್ಳಲು ಅದಕ್ಕೆ ಕಾಲರ್ ಐಡಿ ಹಾಕಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಆದರೆ ಬಳಿಕವೂ ಆಹಾರ ಅರಸಿಕೊಂಡು ಪದೇ ಪದೇ ಊರುಗಳತ್ತ ಇದೇ ಕಾಡಾನೆ ಬರುತ್ತಿತ್ತು.
ಈ ಬಗ್ಗೆ ಮಾಹಿತಿ ನೀಡಿದ, ‘ಕಂಬಿಗಳಲ್ಲಿ ಸಿಲುಕಿದ್ದ ಆನೆಗೆ 2021ರಲ್ಲಿ ನಾಗರಹೊಳೆ ಎಲಿಫೆಂಟ್ 1 ಎಂಬ ಹೆಸರಿನಲ್ಲಿ ಗುರುತಿಸಿ ರೇಡಿಯೊ ಕಾಲರ್ ಅಳವಡಿಸಲಾಗಿತ್ತು. ಅದರಿಂದ ಆನೆ ಯಾವ ಸ್ಥಳದಲ್ಲಿ ಸಿಲುಕಿದೆಯೆಂದು ತಿಳಿಯಲು ಸಹಕಾರವಾಯಿತು. ಕಾಲರ್ ನ ಸಿಗ್ನಲ್ ಆಧರಿಸಿ ಸ್ಥಳಕ್ಕೆ ಇಲಾಖೆ ಸಿಬ್ಬಂದಿ ಧಾವಿಸಿದ್ದಾರೆ’ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕಿ ಸೀಮಾ ತಿಳಿಸಿದರು.
ಈವರೆಗೆ ಒಟ್ಟು 6 ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 10 ಆನೆಗಳಿಗೆ ಅಳವಡಿಸಲಾಗಿದೆ. ರೇಡಿಯೊ ಕಾಲರ್ ಗೆ ದೇಶದಾದ್ಯಂತ ಬೇಡಿಕೆಯಿದ್ದು, ಛತ್ತೀಸಗಢಕ್ಕೂ ಪೂರೈಕೆ ಮಾಡಲಾಗಿದೆ. ಮಹಾರಾಷ್ಟ್ರ ಅರಣ್ಯ ಇಲಾಖೆ ಬೇಡಿಕೆಗೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಪೂರೈಸುತ್ತೇವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕಾರ್ಯಾಚರಣೆ ನಂತರ ತಡೆಗೋಡೆ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ’ ಎಂದು ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ಅಭಿಷೇಕ ತಿಳಿಸಿದರು.