ಶಿಗ್ಗಾವಿ: ಹಾವೇರಿ ಜಿಲ್ಲೆಯ ರೈತರೊಬ್ಬರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ತಮ್ಮ ವಿರುದ್ಧ FIR ದಾಖಲಾಗಿರುವುದರ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿಯ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದಲ್ಲಿ ಉಪಚುನಾವಣೆ ಪ್ರಚಾರದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ನಿನ್ನೆ ಜೆಪಿಸಿ ಬಂದಾಗ ಹಾವೇರಿಯ ರೈತನ ಅಹವಾಲು ಪಡೆದೆವು. ಅದರಲ್ಲಿ ರೈತನ ಜಮೀನು ವಕ್ಫ್ ಎಂದು ಬದಲಾಯಿಸಿದ ಕಾರಣ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿ ಬಂದಿದೆ. ರೈತನ ಕುಟುಂಬಸ್ಥರು ಕೂಡಾ ಮಾಧ್ಯಮದೆದುರು ಮಾತನಾಡಿದ್ದು ಪ್ರಸಾರವಾಗಿದೆ. ಇದ್ಯಾವುದೋ ಕಾಲ್ಪನಿಕ, ಕಾದಂಬರಿ ಬರೆದಿರುವುದಲ್ಲ. ರೈತರ ಕುಟುಂಬದವರು ಬಂದು ಮನವಿ ಕೊಟ್ಟ ಬಳಿಕ ಮಾಧ್ಯಮದವರು ಈ ಬಗ್ಗೆ ಬರೆದಿದ್ದಾರೆ. ಅವರ ಸಂದರ್ಶನ ಪ್ರಸಾರವಾಗಿದೆ” ಎಂದು ಹೇಳಿದ್ದಾರೆ.