ಮುಂಬೈ: ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ 17 ಜನರ ಸಾವಿಗೆ ಕಾರಣವಾದ ದೈತ್ಯ ಹೋರ್ಡಿಂಗ್ ಕುಸಿತಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಉದ್ಯಮಿ ಅರ್ಷದ್ ಖಾನ್ (42) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆ ದಾಖಲಿಸಲು ಕರೆದ ನಂತರ ಕಳೆದ ಏಳು ತಿಂಗಳಿಂದ ತಲೆಮರೆಸಿಕೊಂಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 13ರಂದು ಮಳೆ ಮತ್ತು ಗಾಳಿಯಿಂದಾಗಿ ಇಲ್ಲಿನ ಘಾಟ್ಕೋಪರ್ ಪ್ರದೇಶದ ಪೆಟ್ರೋಲ್ ಪಂಪ್ ಬಳಿ ಅಕ್ರಮವಾಗಿ ಅಳವಡಿಸಿದ್ದ ದೈತ್ಯಾಕಾರದ ಜಾಹೀರಾತು ಫಲಕ ಕುಸಿದು 17 ಜನರು ಸಾವಿಗೀಡಾಗಿದ್ದರು ಮತ್ತು 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ತನಿಖೆ ವೇಳೆ ಹೋರ್ಡಿಂಗ್ ಅಳವಡಿಸಿದ್ದ M/s Ego Media Pvt.Ltd ಬಂಧಿತ ಅರ್ಷದ್ ಖಾನ್ ಜತೆ ನಂಟು ಹೊಂದಿರುವ ಕೆಲವರ ಬ್ಯಾಂಕ್ ಖಾತೆಗೆ 82 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅರ್ಷದ್ ಖಾನ್ ಸರ್ಕಾರಿ ರೈಲ್ವೆ ಮಾಜಿ ಪೊಲೀಸ್ (ಜಿಆರ್ಪಿ) ಕಮಿಷನರ್ ಕ್ವೈಸರ್ ಖಾಲಿದ್ ಅವರ ಪತ್ನಿಯ ವ್ಯವಹಾರ ಸಹಚರರಾಗಿದ್ದರು. ಘಟನೆ ಸಂಭವಿಸಿದ ಬಳಿಕ ತಮ್ಮ ಹೇಳಿಕೆಯನ್ನು ದಾಖಲಿಸಿದ ನಂತರ ಖಾನ್ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ವಿಶೇಷ ತನಿಖಾ ತಂಡ (ಎಸ್ಐಟಿ)ದ ಮುಂದೆ ಹಾಜರಾಗದೆ, ತಲೆಮರೆಸಿಕೊಂಡಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಪೊಲೀಸರು ಖಾನ್ಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ, ಅವರು ತಮ್ಮ ಸ್ಥಳವನ್ನು ಬದಲಾಯಿಸುತ್ತಲೇ ಇದ್ದರು. ಅಂತಿಮವಾಗಿ ಖಾನ್ ಅವರನ್ನು ಭಾನುವಾರ ಲಖನೌನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.