ಬೆಂಗಳೂರು: ತಲೆಮರೆಸಿಕೊಂಡಿದ್ದ 6 ನಕ್ಸಲರು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲು ಸಿದ್ಧರಾಗಿದ್ದಾರೆ. ನಾಗರಿಕ ಸಮಿತಿ, ಶರಣಾಗತಿ ಸಮಿತಿ ಮಾತುಕತೆ ಬಳಿಕ ಇಂದು ನಕ್ಸಲರು ಶರಣಾಗತಿಯಾಗುತ್ತಿದ್ದಾರೆ. ಕಾಡಿನೊಳಗೆ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಶಾಂತಿ ಮಂತ್ರ ಪಠಿಸಿದ್ದರು. ಆರು ನಕ್ಸಲರಾದ ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲಕದ ಸುಂದರಿ, ರಾಯಚೂರು ಮೂಲದ ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಶರಣಾಗತಿಗೆ ನಿರ್ಧರಿಸಿದ್ದಾರೆ. ಅಂತೆಯೇ ಇಂದು (ಜನವರಿ 08) ಸಂಜೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಸಮ್ಮುಖದಲ್ಲಿ ಶರಣಾಗಲು ನಿರ್ಧರಿಸಿದ್ದಾರೆ.
ತಲೆಮರೆಸಿಕೊಂಡಿದ್ದ 6 ನಕ್ಸಲರು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲು ಸಿದ್ಧ
ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ನಿರ್ಧರಿಸಿದ್ದ ನಕ್ಸಲರನ್ನು ಈಗಾಗಲೇ ಕಾಡಿನಿಂದ ನಾಡಿಗೆ ಕರೆದುಕೊಂಡು ಬರಲಾಗಿದೆ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಜೊತೆ ನಕ್ಸಲರು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸುತ್ತಿದ್ದರು. ಆದರೆ ಇವರು ಇದೀಗ ಸಿಎಂ ಸಿದ್ದರಾಮಯ್ಯರ ಮುಂದೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ. ಅದಕ್ಕೆ ಸಿಎಂ ಕೂಡ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ನಾನೇ ನಡೆಸಿಕೊಡ್ತೇನೆ, ಬನ್ನಿ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಸಿಎಂ ಎದುರು ಶರಣಾಗಲು ನಕ್ಸಲರು ಬೆಂಗಳೂರಿನತ್ತ ಹೊರಟಿದ್ದಾರೆ.
ಶೃಂಗೇರಿ ತಾಲೂಕಿನ ಲತಾ ಮಂಡಗಾರು ಬಡ ಆದಿವಾಸಿ ದಂಪತಿಯ ದೊಡ್ಡ ಕುಟುಂಬದ ಹೆಣ್ಣುಮಗಳು ಬಡತನ ಹಾಗೂ ಶಾಲೆಯ ಮಾಸ್ತರರ ಕಿರುಕುಳಗಳಿಂದಾಗಿ 6ನೆಯ ತರಗತಿಗೆ ಓದು ನಿಲ್ಲಿಸಿದರು. ಅಂತ್ಯದ ನೂರಾರು ಆದಿವಾಸಿ ಕುಟುಂಬಗಳಂತೆಯೇ ಈ ಕುಟುಂಬವು ಸಹ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಡಿ ಮನೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಅದರ ವಿರುದ್ಧದ ಹೋರಾಟ ನಡೆಸುತ್ತಿದ್ದ ಚಳವಳಿಯ ಭಾಗವಾದರು. ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಬೆಲೆ ನೀಡದ ಸರ್ಕಾರದ ಧೋರಣೆಗೆ ಬೇಸತ್ತು 2000ರಲ್ಲಿ 18ನೇ ವಯಸ್ಸಿನಲ್ಲಿ ಸಶಸ್ತ್ರ ಹೋರಾಟಕ್ಕೆ ಧುಮುಕಿ ಅಂದಿನಿಂದ ಕರ್ನಾಟಕ ಹಾಗೂ ಕೇರಳಗಳಲ್ಲಿ ಸಂಚರಿಸುವ ದಳದ ಭಾಗವಾಗಿದ್ದು, ಇಂದು ಮತ್ತೆ ಜನಪದ ಚಳವಳಿಗಳಲ್ಲಿ ಪ್ರಜಾತಂತ್ರವಾಗಿ ಹೋರಾಟಗಳನ್ನು ನಡೆಸಲು ಮುಖ್ಯವಾಹಿನಿಯ ಭಾಗವಾಗುತ್ತಿದ್ದಾರೆ. ಕೇವಲ 6ನೇ ತರಗತಿಯವರೆಗೆ ಓದಿರುವ ಲತಾರವರು ಯೋಜನೆಗಳ ಸ್ಪಷ್ಟತೆ ಹಾಗೂ ಬದ್ಧತೆ ಬೆರಗು ಹುಟ್ಟಿಸುವಂಥದ್ದು. ಈಗಿನ ನಕ್ಸಲ್ ತಂಡದ ನಾಯಕಿ ಎಂದು ಹೇಳಬಹುದು.