ಅಂದಿನ ದಿನಗಳಲ್ಲಿ ಚಿತ್ರ ಜಗತ್ತನೆಡೆ ಬೆರಗು ಗಣ್ಣುಗಳಿಂದ ನೋಡುತ್ತಿದ್ದ ನಮ್ಮಂಥವರ ಎದೆಗಳಲ್ಲಿ ಒಂದು ತಳಕಿನಂತೆ ಕಂಗೊಳಿಸಿದವರು ಶ್ಯಾಮ್ ಬೆನಗಲ್…ಅಂಕುರ್, ಮಂಥನ್, ನಿಶಾಂತ್, ಭೂಮಿಕಾ…ಮುಂತಾದ ಹೊಚ್ಚ ಹೊಸ ಬಗೆಯ ಚಿತ್ರಗಳನ್ನು ಮಾಡಿ ಅಂದಿನ ಭಾರತೀಯ ಚಿತ್ರರಂಗದ ದೊಡ್ಡ ಸ್ಟಾರ್ ನಿರ್ದೇಶಕರಾದರು. ಯಾವುದೇ ಸ್ಟಾರ್ ನಟ ನಟಿಯರನ್ನು ಅವಲಂಬಿಸದೇ ತಮ್ಮ ಚಿತ್ರಗಳಲ್ಲಿ ಅಭಿನಯಿಸಿದವರೆಲ್ಲರನ್ನೂ ಸ್ಟಾರ್ಗಳನ್ನಾಗಿ ಮಾಡಿದರು.
ಅನಂತನಾಗ್, ಸ್ಮಿತಾ ಪಾಟೀಲ್, ಶಬಾನಾ ಆಜ್ಮಿ ಇವರೆಲ್ಲರೂ ಬೆನಗಲ್ ಅವರ ಚಿತ್ರಗಳಲ್ಲಿ ಸತತವಾಗಿ ಮುಖ್ಯ ಪಾತ್ರಗಳಲ್ಲಿ ಮಿಂಚಿದವರು.ಅನಂತನಾಗ್ ಮೊತ್ತ ಮೊದಲು ನಾಯಕ ರಾಗಿದ್ದು ಇವರ ಚಿತ್ರದಲ್ಲಿಯೇ.. ಪಲ್ಲವಿ ಚಿತ್ರಕ್ಕೆ ಪ್ರಶಸ್ತಿ ಬಂದು ನಾವು ದೆಹಲಿಗೆ ಹೋಗಿದ್ದಾಗ ಆ ಸಮಾರಂಭದಲ್ಲಿ ಅವರ ಭೇಟಿಯಾಗಿ ಅವರೇ ನನ್ನನ್ನು ಮಾತನಾಡಿಸಿದಾಗ ನನಗೆ ಆದ ಸಂತೋಷದ ನೆನಪುಗಳು ಈಗಲೂ ನನಗೆ ಉಲ್ಲಾಸ ತರುತ್ತದೆ. ಯಾರನ್ನೂ ಎಂದೂ ನನಗೆ ಪಾತ್ರ ಕೊಡಿ ಎಂದು ಕೇಳದ ನಾನು ಅವರನ್ನು ಪಾತ್ರ ಕೊಡಿ ಎಂದು ಪತ್ರ ಬರೆದು ಕೇಳಿದ್ದೆ. ಆಗ ಸುಮಾರು ಒಂದೂವರೆ ದಶಕದ ಕಾಲ ಚಿತ್ರರಂಗದಲ್ಲಿ ಅವರದೇ ಪ್ರಭೆ. ಅವರ ದಾರಿಯಲ್ಲಿ ಅನೇಕ ಹೊಸ ಹೊಸ ನಿರ್ದೇಶಕರು ಬಂದರು.
ನಂತರ ನಿಧಾನಕ್ಕೆ ಎಲ್ಲರಂತೆ ಅವರೂ ಸೈಡ್ ವಿಂಗ್ಗೆ ಹೋದರು ಎನಿಸುತ್ತದೆ. ಈಗ ಒಂದೆರಡು ವರ್ಷದ ಹಿಂದೆ ಅವರು ಮುಂಬಯಿಯಲ್ಲಿ ಅವರ ಆಫೀಸ್ ಕೋಣೆಯಲ್ಲಿ ಕೂತು ನಿರ್ಮಾಪಕರನ್ನು ನಿರೀಕ್ಷಿಸುತ್ತಿದ್ದ ಕುರಿತು ಯಾವುದೋ ಲೇಖನ ನೋಡಿದೆ. ಒಂದು ಬಗೆಯಲ್ಲಿ ಸಂಕಟವಾಯಿತು. ಇಂತಹ ಶ್ಯಾಮ್ ನಿಧನರಾಗಿದ್ದಾರೆ. ಅವರಿಗೆ ಗೌರವ ಪೂರ್ವಕ ಅಂತಿಮ ನಮನಗಳು.