ನೆಲಮಂಗಲ: ತಮ್ಮ ತಾಯಿಯನ್ನು ಅವಿಸ್ಮರಣೀಯವಾಗಿರಿಸಲು ದೇಗುಲ ರೀತಿಯ ಸ್ಮಾರಕ ನಿರ್ಮಾಣ ಮಾಡುವ ಮೂಲಕ ಲೀಲಾವತಿ ಅವರ ಪುತ್ರ ವಿನೋದ್ರಾಜ್ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿರುವ ಲೀಲಾವತಿ ಎಸ್ಟೇಟ್ನಲ್ಲಿ ಒಂದು ಎಕರೆ ಜಮೀನಿನಲ್ಲಿ ನೂತನವಾಗಿ ಲೀಲಾವತಿಯವರ ವಿಶೇಷ ಮತ್ತು ಅಪರೂಪದ ಭಾವಚಿತ್ರಗಳ ಸಹಿತ ಕಲಾತ್ಮಕವಾಗಿ ರೂ.ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವರನಟಿ ಡಾ.ಎಂ.ಲೀಲಾವತಿ ದೇಗುಲ’ವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ತಾಯಿ-ಮಗನ ಬಾಂಧವ್ಯಕ್ಕೆ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಅವರು ಸಾಕ್ಷಿಯಾಗಿದ್ದಾರೆ. ತಂದೆ-ತಾಯಿ ಇರುವಾಗಲೇ ಮರೆಯುವವರಿರುವಾಗ ತಾಯಿಯ ಮಮತೆ ಮತ್ತು ಮಹತ್ವವನ್ನು ಅರಿತಂತಹ ಅವರ ಪುತ್ರ ವಿನೋದ್ ರಾಜ್ ತಾಯಿಗಾಗಿ ದೇವಾಲಯವನ್ನೇ ನಿರ್ಮಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಈ ವೇಳೆ ಸಚಿವರನ್ನು ಸನ್ಮಾನಿಸಿದ ವಿನೋದ್ರಾಜ್ ಮಾತನಾಡುತ್ತಾ ಕರ್ನಾಟಕ ಸರ್ಕಾರ ನಮಗೆ ನಿಜಕ್ಕೂ ಪೂರ್ಣ ಪ್ರಮಾಣವಾಗಿ ಸ್ಪಂಧಿಸಿದೆ. ಅಮ್ಮನ ಅಂತ್ಯಕ್ರಿಯೆಗಾಗಿ ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಜಾಗ ನೀಡುವ ಭರವಸೆ ನೀಡಿದ್ದರು. ಆದರೆ ನನ್ನ ತಾಯಿಯವರ ಆಶಯದಂತೆ ಇಲ್ಲಿನ ತೋಟದ ಪುಣ್ಯಭೂಮಿಯಲ್ಲಿಯೇ ಅಂತ್ಯಕ್ರಿಯೆ ನಡೆದಿತ್ತು. ಸೋಲದೇವನಹಳಿ ಸುತ್ತಮುತ್ತಲ ಜನರ ಆಣತಿಯಂತೆ ಅವರನ್ನು ಜೀವಂತವಾಗಿರಿಸಲು ದೇಗುಲವನ್ನು ನಿರ್ಮಿಸಲಾಗಿದೆ ಎಂದು ಭಾವುಕರಾದರುಇವರೊಟ್ಟಿಗೆ ವಿನೋದ್ ರಾಜ್ ಪತ್ನಿಮತ್ತು ಮಗ ಯುವರಾಜ್, ಬಂಧು ಬಳಗದವರಿದ್ದರು.
ಚಲನಚಿತ್ರ ರಂಗದ ಹಿರಿಯ ಕಲಾವಿದರಾದ ಪ್ರಣಯರಾಜ ಶ್ರೀನಾಥ್, ಕುಮಾರ್ ಗೋವಿಂದ್, ಗಿರಿಜಾ ಲೋಕೇಶ್, ಬ್ಯಾಂಕ್ ಜನಾರ್ಧನ್, ಹೊನ್ನವಳ್ಳಿ ಕೃಷ್ಣ ಕೀರ್ತಿರಾಜ್, ಧರ್ಮ ಕೀರ್ತಿರಾಜ್, ಎಂ.ಎನ್. ಉಮೇಶ್, ಲಕ್ಷ್ಮೀದೇವಮ್ಮ, ಟೆನ್ನಿಸ್ ಕೃಷ್ಣ, ಉಮೇಶ್, ಶೈಲಶ್ರೀ ಸುದರ್ಶನ್, ನಿರ್ದೇಶಕರಾದ ಜಿ.ಕೆ. ಮುದ್ದುರಾಜ್, ಗುರುರಾಜ್ ಹಲವಾರು ಪೋಷಕ ನಟರುಗಳು ಪಾಲ್ಗೊಂಡಿದ್ದರು.