ನವದೆಹಲಿ: ರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಆಂಧ್ರಪ್ರದೇಶದ ತಿರುಪತಿ ತಿರುಮಲದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವ ಲಡ್ಡು ವಿವಾದಕ್ಕೆ ಸಂಬಂಧಪಟ್ಟಂತೆ ಸ್ವತಂತ್ರ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದೆ ಎಂಬ ವಿವಾದಕ್ಕೆ ಸಂಬಂಧಪಟ್ಟಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಸೂಚಿಸಿ ಐವರು ಇರುವ ತಂಡವನ್ನು ರಚಿಸಿ ನಿರ್ಧಾರ ಪ್ರಕಟಿಸಿದೆ. ವಿಶೇಷ ತನಿಖಾ ತಂಡದಲ್ಲಿ ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್ಎಸ್ಎಸ್ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದು-ಸದಸ್ಯರ ಸ್ವತಂತ್ರ ಎಸ್ಐಟಿಯನ್ನು ರಚಿಸಲು ಸೂಚಿಸಲಾಗಿದೆ.
ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರ ಪೀಠವು ಇಂದು ಈ ಪ್ರಕರಣದ ವಿಚಾರಣೆಯನ್ನು ನಡೆಸಿದ್ದಾರೆ.
ಸಿಬಿಐನ ಇಬ್ಬರು ರಾಜ್ಯದ ಇಬ್ಬರು ಹಾಗೂ ಫುಡ್ ಸೇಪ್ಟಿ ಇಲಾಖೆಯ ಓರ್ವ ಅಧಿಕಾರಿಯನ್ನೊಳಗೊಂಡಂತೆ ಐವರ ತನಿಖಾ ತಂಡವನ್ನು ರಚಿಸುವಂತೆ ಸೂಚಿಸಲಾಗಿದೆ.
ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ಗೆ ಹೇಳಿಕೆ ನೀಡಿದ್ದು, ಎಸ್ಐಟಿಯ ಮೇಲೆ ಕೇಂದ್ರದ ಹಿರಿಯ ಅಧಿಕಾರಿ ನಿಗಾ ವಹಿಸಬೇಕು, ಇದರಿಂದ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು.ಪ್ರಾಣಿಗಳ ಕೊಬ್ಬು ಬಳಸಲು ಸಾಧ್ಯವಿಲ್ಲ. ಇದು ಕೋಟ್ಯಂತರ ಜನರ ನಂಬಿಕೆಯ ಪ್ರಶ್ನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಾಗ ಇದೊಂದು ರಾಜಕೀಯ ನಾಟಕವಾಗಬಾರದು, ಸ್ವತಂತ್ರ ಸಂಸ್ಥೆ ಇದ್ದರೆ ಆತ್ಮವಿಶ್ವಾಸ ಮೂಡುತ್ತದೆ. ಸೆಪ್ಟೆಂಬರ್ 30 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯವು ನೇಮಿಸಿದ ಎಸ್ಐಟಿ ತನಿಖೆಯನ್ನು ಮುಂದುವರಿಸಬೇಕೇ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂದು ನಿರ್ಧರಿಸಲು ಸಹಾಯ ಮಾಡುವಂತೆ ಪೀಠವು ಮೆಹ್ತಾ ಅವರನ್ನು ಕೇಳಿತ್ತು.
ಪ್ರಸಾದ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆಯೇ ಅಥವಾ ಇಲ್ಲವೇ ಎಂದು ಆಂಧ್ರಪ್ರದೇಶ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ. ಟಿಡಿಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಲಡ್ಡುಗಳ ರುಚಿ ಚೆನ್ನಾಗಿಲ್ಲ ಎಂದು ಜನರು ದೂರಿದ್ದಾರೆ, ಕಲುಷಿತ ತುಪ್ಪವನ್ನು ಪ್ರಸಾದಕ್ಕೆ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.