ತಿ.ನರಸೀಪುರ: ಮೂರು ದಿನಗಳ ಕಾಲ ಅದ್ಧೂರಿಯಾಗಿ 13ನೇ ಕುಂಭಮೇಳ ನಡೆದಿದ್ದು, ಜನಸಾಗರವೇ ಹರಿದು ಬಂದು ಪುಣ್ಯಸ್ನಾನ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್ ಸಿ.ಮಹದೇವಪ್ಪ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಕಲ್ಯಾಣಿ ಮಂಟಪದ ಮುಂಭಾಗ ಸಭಾ ಮಂಟಪದಲ್ಲಿ 13 ನೇ ಕುಂಭಮೇಳದ ಸಮಾರೋಪ ಸಮಾರಂಭದ ಧಾರ್ಮಿಕಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭೆ ಉದ್ದೇಶಿಸಿ ಮಾತನಾಡಿದ ಅವರು ಕುಂಭಮೇಳ ಧಾರ್ಮಿಕ ಕಾರ್ಯಕ್ರಮವು ಕಳೆದ ಮೂರು ದಿನಗಳಿಂದ ಅದ್ದೂರಿಯಾಗಿ ತಿರುಮಕೂಡಲು ನರಸೀಪುರ ದಲ್ಲಿ ಕುಂಭಮೇಳ ನಡೆಯುತ್ತಿದೆ. ಜನಸಾಗರವೇ ಹರಿದು ಬಂದು ಪುಣ್ಯ ಸ್ಥಾನ ಮಾಡುತ್ತಿದ್ದಾರೆ. 1989 ರಲ್ಲಿ ಮೊದಲ ಕುಂಭಮೇಳ ನಡೆಯಿತು. ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಡೆಯುತ್ತದೆ. ಕೋವಿಡ್ ಸಂದರ್ಭದಲ್ಲಿ ಮಾತ್ರ ಒಮ್ಮೆ ನಡೆಯಲಿಲ್ಲ ಎಂದರು.
ಕುಂಭಮೇಳ ಆಚರಣೆಗೆ ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿ ಅಗತ್ಯ ಅನುದಾನವನ್ನು ನೀಡಿದ್ದಾರೆ. ಜಿಲ್ಲಾಡಳಿತ ವ್ಯವಸ್ಥಿತವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ. ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಧಾರ್ಮಿಕ ಸಹಿಷ್ಣುತೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಧಾರ್ಮಿಕ ಆಚಾರ ವಿಚಾರಗಳ ಆಚರಣೆಗೆ ಮುಕ್ತವಾದ ಅವಕಾಶವನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದೆ. ಸಂವಿಧಾನ ಎಲ್ಲರ ಹಕ್ಕುಗಳನ್ನು ರಕ್ಷಣೆ ಮಾಡುತ್ತದೆ. ನಾವು ಭಾರತೀಯರು, ನಾವೆಲ್ಲರೂ ಒಂದೇ ನಮ್ಮಲ್ಲಿ ಮೇಲು ಕೀಳು ಭಾವನೆ ಇಲ್ಲ ಎಂಬ ಭಾವನೆಯನ್ನು ಪ್ರತಿಯೊಬ್ಬರೂ ಬೆಳಸಿಕೊಳ್ಳಬೇಕು ದೇಶದ 40 ಕೋಟಿ ಜನರನ್ನು ರಕ್ಷಣೆ ಮಾಡುತ್ತಿರುವುದು ಸಂವಿಧಾನ, ಎಂದು ತಿಳಿಸಿದರು.
ನದಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ. ತಮ್ಮ ಚರಂಡಿ, ಮನೆಯ ತ್ಯಾಜ್ಯ ನೀರನ್ನು ನದಿ ಕಾಲುವೆಗಳಿಗೆ ಹರಿಯಲು ಬಿಡಬಾರದು. ನೀರು ರಾಷ್ಟ್ರದ ಸಂಪತ್ತು. ಇದನ್ನು ಉಳಿಸಿ ಬೆಳಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಸ್ವಾಮಿಜಿ ಗಳಾದ ಶ್ರೀ ನಿರ್ಮಲಾನಂದ ಮಹಾ ಸ್ವಾಮಿಗಳು, ಸುತ್ತೂರು ಮಠದ ಸ್ವಾಮಿಜಿ ಗಳಾಗದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸೇರಿ ದಂತೆ ವಿವಿದ ಮಠಗಳ ಮಹಾಸ್ವಾಮಿಗಳು, ಕೈಲಾಸಾಶ್ರಮ ಮಹಾಸಂಸ್ಥಾನದ ತಿರುಚ್ಚಿ ಮಹಾಸ್ವಾಮಿಗಳು, ಶಿವಪುರಿ ಮಹಾಸ್ವಾಮಿಗಳು, ಸೇರಿದಂತೆ ಜಿಲ್ಲಾಧಿ ಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ತಹಸೀಲ್ದಾರ್ ಸುರೇಶ್ ಆಚಾರ್, ಪುರಸಭಾ ಮುಖ್ಯ ಅಧಿಕಾರಿ ಬಿ. ಕೆ ವಸಂತಕುಮಾರಿ, ಚಸ್ಕಾಂ ಎ ಇ ಇ ವೀರೇಶ್, ಪಿ ಡಬ್ಲ್ಯೂ ಎ ಇ ಇ ಸತೀಶ್ ಚಂದ್ರನ್ ಉಪಸ್ಥಿತರಿದ್ದರು.