ತಿ.ನರಸೀಪುರ: ತಿ.ನರಸೀಪುರ ಪುರಸಭೆಯ 2026 27ನೇ ಸಾಲಿನ ನಿರೀಕ್ಷಿತ ಬಜೆಟ್ ಅನ್ನು ಪುರಸಭೆ ಆಡಳಿತಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳಾದ ಆಶಪ್ಪ ಅವರು ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಂಡಿಸಿದರು.ಈ ಬಜೆಟ್ನಲ್ಲಿ ಒಟ್ಟು 24,33,33,000 ನಿರೀಕ್ಷಿತ ಆದಾಯ ಹಾಗೂ 23,46,88,542 ನಿರೀಕ್ಷಿತ ವೆಚ್ಚ ಅಂದಾಜಿಸಲಾಗಿದ್ದು, ಪುರಸಭೆಗೆ 86,44,458 ಉಳಿತಾಯ ಉಳಿಯಲಿದೆ. ಪಟ್ಟಣದ ಮೂಲ
ಸೌಕರ್ಯ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಸುಧಾರಣೆ, ಬೀದಿ ದೀಪಗಳ ನಿರ್ವಹಣೆ ಹಾಗೂ ಸ್ವಚ್ಛತಾ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಆಶಪ್ಪ ತಿಳಿಸಿದ್ದಾರೆ.ಪುರಸಭೆಗೆ ಹಿಂದಿನ ಸಾಲಿನ ಉಳಿಕೆ 3,30,64,458 ಸೇರಿದಂತೆ ತೆರಿಗೆ ಸಂಗ್ರಹ, ಮನೆ ತೆರಿಗೆ, ನೀರಿನ ಶುಲ್ಕ, ಅಂಗಡಿ ಬಾಡಿಗೆ, ಪರವಾನಗಿ ಶುಲ್ಕ, ದಂಡ ಹಾಗೂ ಮಾರುಕಟ್ಟೆ ಆದಾಯ ಸೇರಿದಂತೆ ಹಲವು ಮೂಲಗಳಿಂದ ಆದಾಯ ನಿರೀಕ್ಷಿಸಲಾಗಿದೆ. ಇದರ ಜೊತೆಗೆ 15ನೇ ಹಣಕಾಸು ಆಯೋಗದ ಅನುದಾನ 3,63,00,000 ಸೇರಿದಂತೆ ವಿವಿಧ ಯೋಜನೆಗಳ ಅನುದಾನಗಳ ಮೂಲಕ ಆದಾಯ ಲಭ್ಯವಾಗಲಿದೆ ಎಂದಿದ್ದಾರೆ.ವಿವಿಧ ಅಭಿವೃದ್ಧಿ ಹಾಗೂ ನಿರ್ವಹಣಾ ಕಾರ್ಯಗಳಿಗೆ ಪುರಸಭೆ ಆಡಳಿತ ಮತ್ತು ಸಿಬ್ಬಂದಿ ವೆಚ್ಚಕ್ಕೆ 6,69,21,542, ಕುಡಿಯುವ ನೀರಿನ ಯೋಜನೆಗಳಿಗೆ 50 ಲಕ್ಷ, ರಸ್ತೆ ಅಭಿವೃದ್ಧಿಗೆ 55 ಲಕ್ಷ, ಬೀದಿ ದೀಪಗಳ ನಿರ್ವಹಣೆಗೆ 10 ಲಕ್ಷ, ಸ್ವಚ್ಛತೆ ಮತ್ತು ಘನತ್ಯಾಜ್ಯ ನಿರ್ವಹಣೆಗೆ 40 ಲಕ್ಷ ಸೇರಿದಂತೆ ಹಲವು ಕಾಮಗಾರಿಗಳಿಗೆ ವೆಚ್ಚ ಅಂದಾಜಿಸಲಾಗಿದೆ.ಇದಲ್ಲದೆ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ 3 ಕೋಟಿ, ಇತರೆ ನಗರಾಭಿವೃದ್ಧಿ ಯೋಜನೆಗಳಿಗೆ 2.61 ಕೋಟಿ ಹಾಗೂ ರಸ್ತೆ, ನೀರು ಮತ್ತು ಮೂಲಸೌಕರ್ಯ ಕಾಮಗಾರಿಗಳಿಗೆ 1.44 ಕೋಟಿ ವೆಚ್ಚವನ್ನು ಮೀಸಲಿಡಲಾಗಿದೆ.ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ (ಸಿ.ಒ) ಶ್ರೀನಿವಾಸ್, ಮೆನೇಜರ್ ಮಹೇಂದ್ರ, ಲೆಕ್ಕಾಧಿಕಾರಿ ತ್ರಿವೇಣಿ ವಿನಯ್ ಸೇರಿದಂತೆ ಪುರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಿ.ನರಸೀಪುರ ಪುರಸಭೆ24.33 ಕೋಟಿ ಬಜೆಟ್ ಮಂಡನೆ ಮೂಲಭೂತ ಸೌಕರ್ಯ,ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಆದ್ಯತೆ : 86.44 ಲಕ್ಷ ಉಳಿತಾಯ ನಿರೀಕ್ಷೆ



