ಬೆಂಗಳೂರು: ತುರಹಳ್ಳಿ ಅರಣ್ಯದ ಆಸುಪಾಸಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.
ತಮ್ಮ ಪ್ರದೇಶಗಳಲ್ಲಿ ಚಿರತೆ ಓಡಾಟದ ವಿಡಿಯೋ ಹಾಗೂ ಚಿತ್ರಗಳನ್ನು ಸ್ಥಳೀಯರು ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ವೇಳೆ ಚಿರತೆ ಸರೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಜನರು ನಮ್ಮನ್ನು ಸಂಪರ್ಕಿಸಿದ್ದಾರೆ. ಆದರೆ, ಈಗಾಗಲೇ ಚಿರತೆ ತನ್ನ ಆವಾಸಸ್ಥಾನ ಸೇರಿಕೊಂಡಿದ್ದು, ಆತಂಕ ಪಡುವ ಅಗತ್ಯವಿಲ್ಲ. ಆದರೂ, ಚಿರತೆ ಚಲನವಲನದ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಬೆಂಗಳೂರು ನಗರ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಶಿವಶಂಕರ್ ಅವರು ಹೇಳಿದ್ದಾರೆ.
ಚಿರತೆ ಕಾರ್ಯಪಡೆಯ ತಂಡ ಚಿರತೆಯ ಮೇಲೆ ತೀವ್ರ ನಿಗಾ ಇರಿಸಿದೆ. 597 ಎಕರೆ ವಿಸ್ತೀರ್ಣದ ತುರಹಳ್ಳಿ ಅರಣ್ಯದಲ್ಲಿ ಚಿರತೆಗಳು ಹೆಚ್ಚಿವೆಯೇ ಎಂಬುದನ್ನು ಪತ್ತೆ ಹಚ್ಚಲು ಕ್ಯಾಮರಾ ಟ್ರ್ಯಾಪ್ ಅಳವಡಿಸುವ ಕುರಿತಂತೆಯೂ ಚಿಂತನೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ನ.26ರಂದು ಮೊದಲ ಬಾರಿಗೆ ಕಾಡಿನೊಳಗಿನ ಬಂಡೆಯ ಮೇಲೆ ಚಿರತೆ ಕುಳಿತಿರುವುದು ಕಂಡು ಬಂದಿತ್ತು. ಹಲವರು ತಮ್ಮ ಮನೆಗಳು ಮತ್ತು ಅಪಾರ್ಟ್ಮೆಂಟ್ ಸಂಕೀರ್ಣಗಳ ಬಾಲ್ಕನಿಯಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಿದ್ದರು. ಇದರ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಕಾಡಿನೊಳಗಿನ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ತಡೆದಿದ್ದರು.
ಅರಣ್ಯದ ಸುತ್ತಮುತ್ತ ಚಿರತೆ ಇರುವ ಬಗ್ಗೆ ಎಚ್ಚರಿಕೆಯ ಬೋರ್ಡ್ಗಳನ್ನು ಹಾಕಲಾಗಿದೆ. ಅರಣ್ಯಕ್ಕೆ ತೆರಳದಂತೆ ಮತ್ತು ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ಗೆ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ನೆರೆಹೊರೆಯಲ್ಲಿ ಚಿರತೆ ಇದೆ ಎಂಬ ಆಲೋಚನೆ ಕೂಡ ಭಯ ಹುಟ್ಟಿಸುತ್ತಿದೆ. ಇದೀಗ ಚಿರತೆ ಪ್ರತ್ಯಕ್ಷವಾಗಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಅಪಾರ್ಟ್ಮೆಂಟ್ಗಳಿಗೆ ಚಿರತೆಗಳು ನುಗ್ಗುತ್ತಿರುವುದು ಹೊಸದೇನಲ್ಲ ಎಂಬಂತಾಗುತ್ತಿದೆ. ಅಧಿಕಾರಿಗಳು ಶೀಘ್ರಗತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಎಲ್.ರಾವ್ ಅವರು ಹೇಳಿದ್ದಾರೆ.
ತುರಹಳ್ಳಿ ಅರಣ್ಯವು ಕನಕಪುರ ರಸ್ತೆಯಲ್ಲಿದೆ, ಬಿಎಂ ಕಾವಲ್ ಮೀಸಲು ಅರಣ್ಯದಿಂದ ಕೇವಲ ಒಂದು ಕಿಮೀ ಮತ್ತು ಯುಎಂ ಕಾವಲ್ ಮೀಸಲು ಅರಣ್ಯದಿಂದ 2 ಕಿಮೀ ದೂರದಲ್ಲಿದೆ. 2021ರಲ್ಲಿ ತುರಹಳ್ಳಿ ಅರಣ್ಯವನ್ನು ಟ್ರೀ ಪಾರ್ಕ್ ಆಗಿ ಪರಿವರ್ತಿಸಲು ಸರಕಾರ ಮುಂದಾಗಿತ್ತು. ವನ್ಯಜೀವಿ ಸಂರಕ್ಷಕರು ಮತ್ತು ಸ್ಥಳೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಕೈಬಿಟ್ಟಿದೆ. ಈ ಅರಣ್ಯವು ಇದೀಗ ಕಾಡುಹಂದಿಗಳು, ಮಚ್ಚೆಯುಳ್ಳ ಜಿಂಕೆಗಳು ಮತ್ತು ಇತರ ಸಣ್ಣ ಸಸ್ಯಹಾರಿ ಮತ್ತು ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ.