ನವದೆಹಲಿ: ಕುಸ್ತಿ, ವೇಟ್ ಲಿಫ್ಟಿಂಗ್, ಬಾಕ್ಸಿಂಗ್ ಮತ್ತು ಜೂಡೊ ಕ್ರೀಡೆಗಳಿಗೆ ಸಂಬಂಧಿಸಿದಂತೆ ದೇಹದ ತೂಕ ನಿರ್ವಹಣೆಯು ಆಯಾ ಅಥ್ಲೀಟ್ ಮತ್ತು ಅವರ ಕೋಚ್ ಜವಾಬ್ದಾರಿಯಾಗಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ(ಐಒಎ) ಅಧ್ಯಕ್ಷೆ ಡಾ. ಪಿ.ಟಿ ಉಷಾ ಸ್ಪಷ್ಟಪಡಿಸಿದ್ದಾರೆ.
ಐಒಎ ನೇಮಕ ಮಾಡಿರುವ ಮುಖ್ಯ ವೈದ್ಯಾಧಿಕಾರಿ ಇದಕ್ಕೆ ಜವಾಬ್ದಾರರಲ್ಲ ಎಂದೂ ಅವರು ಹೇಳಿದ್ದಾರೆ. ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಂಡಿರುವ ಭಾರತದ ಪ್ರತಿಯೊಬ್ಬ ಅಥ್ಲೀಟ್ಗೂ ಪ್ರತ್ಯೇಕ ಸಹಾಯಕ ಸಿಬ್ಬಂದಿ ಇದ್ದಾರೆ. ಹಲವು ವರ್ಷಗಳಿಂದ ಅವರ ಜೊತೆ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ ಎಂದು ಉಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಐಒಎ ವೈದ್ಯಕೀಯ ತಂಡವನ್ನು ನೇಮಕ ಮಾಡಿದೆ. ಅಥ್ಲೀಟ್ಗಳು ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಮತ್ತು ಸ್ಫರ್ಧೆಯ ನಂತರ ಅಥ್ಲೀಟ್ಗಳ ಚೇತರಿಕೆ ಮತ್ತು ಗಾಯಗಳ ನಿರ್ವಹಣೆಗೆ ಆ ತಂಡ ನೆರವಾಗುತ್ತದೆ. ತಮ್ಮ ವೈಯಕ್ತಿಕ ನ್ಯೂಟ್ರಿಶಿಯನಿಸ್ಟ್ ಮತ್ತು ಪಿಸಿಯೊಥೆರಪಿಸ್ಟ್ ಇಲ್ಲದ ಅಥ್ಲೀಟ್ಗಳಿಗೂ ನೆರವಾಗುವಂತೆ ಈ ವೈದ್ಯಕೀಯ ತಂಡವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.