ಏಷ್ಯಾ ಖಂಡದಲ್ಲಿ ಕ್ರಿಕೆಟ್ ಮಟ್ಟಿಗೆ ಪಾಕಿಸ್ತಾನವೆಂಬುದು ವೇಗದ ಬೌಲರ್ ಗಳ ಖಣಜ. ಇಮ್ರಾನ್ ಖಾನ್, ವಾಸಿಂ ಅಕ್ರಂ, ವಕಾರ್ ಯೂನಸ್, ಶೊಯೇಬ್ ಅಖ್ತರ್ ಹೀಗೆ ಒಬ್ಬರಿಗಿಂತ ಒಬ್ಬರು ಮಿಗಿಲು ಎಂಬಂತೆ ಆ ತಂಡದಲ್ಲಿ ವೇಗದ ಬೌಲರ್ ಗಳು ಬಂದು ಹೋಗಿದ್ದಾರೆ.
ಇದೀಗ ವಿಶ್ವಮಟ್ಟದಲ್ಲಿ ಮಿಂಚುತ್ತಿರುವ ಶಾಹಿನ್ ಅವರು ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್ ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ. ಪಂದ್ಯದಲ್ಲಿ ಪಾಕಿಸ್ತಾನ ಸೋತರೂ ಶಾಹಿನ್ ಅಫ್ರಿದಿ ಅವರ ಬೌಲಿಂಗ್ ಗಮನ ಸೆಳೆಯಿತು.
ನಿಗದಿತ 4 ಓವರ್ ಗಳಲ್ಲಿ 22 ರನ್ ಗಳಿಗೆ 3 ವಿಕೆಟ್ ಕಬಳಿಸಿದರು. ಈ ಸಂದರ್ಭದಲ್ಲಿ ಅವರು ಟಿ20ಯಲ್ಲಿ 100 ವಿಕೆಟ್ ಗಳ ಸಾಧನೆಯನ್ನು ಮಾಡಿದರು. ಜೊತೆಗೆ ಟೆಸ್ಟ್, ಏಕದಿನ ಮತ್ತು ಟಿ20 ಹೀಗೆ ಕ್ರಿಕೆಟ್ ನ ಮೂರೂ ಮಾದರಿಗಳಲ್ಲಿ 100 ವಿಕೆಟ್ ಗಳಿಸಿದ ಪಾಕಿಸ್ತಾನದ ಮೊದಲ ಬೌಲರ್ ಎಂಬ ಗೌರವಕ್ಕೆ ಅವರು ಪಾತ್ರವಾದರು.