ದೊಡ್ಡ ಮೊತ್ತ ಕಂಡಿದ್ದ ಮೊದಲನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿದ್ದ ಕರ್ನಾಟಕ ಇದೀಗ ವಿಜಯ ಹಜಾರೆ ಟ್ರೋಫಿಯ ಎರಡನೇ ಪಂದ್ಯದಲ್ಲಿ ಪುದುಚೇರಿಯನ್ನು ಸೋಲಿಸಿದೆ. ಯುವ ಎಡಗೈ ಬ್ಯಾಟರ್ ಸ್ಮರಣ್ ರವಿಚಂದ್ರನ್ ಅವರ ಅಜೇಯ ಶತಕದ ಜತೆಗೆ ವಿದ್ಯಾಧರ ಪಾಟೀಲ್ ಅವರ ಕರಾರುವಾಕ್ ಬೌಲಿಂಗ್ ನಿರ್ವಹಣೆಯಿಂದ ಕರ್ನಾಟಕ ತಂಡ 3 ವಿಕೆಟ್ಗಳಿಂದ ಜಯ ದಾಖಲಿಸಿದೆ.
ನರೇಂದ್ರ ಮೋದಿ ಕ್ರೀಡಾಂಗಣದ ಎ ಗ್ರೌಂಡ್ನಲ್ಲಿ ಸೋಮವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಪುದುಚೇರಿ ತಂಡವನ್ನು 211 ರನ್ಗಳಿಗೆ ಕಟ್ಟಿಹಾಕಿದ ಕರ್ನಾಟಕ,9.1 ಓವರ್ಗಳು ಬಾಕಿ ಇರುವಂತೆಯೇ 7 ವಿಕೆಟ್ ಕಳೆದುಕೊಂಡು ಪ್ರಯಾಸದ ಜಯ ಗಳಿಸಿತು.ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಕರ್ನಾಟಕ, ವಿಜೈ ರಾಜಾ ಮತ್ತು ಅಮನ್ ಹಕಿಮ್ ದಾಳಿಗೆ ನಲುಗಿತು. 78 ರನ್ ಕಲೆಹಾಕುವಷ್ಟರಲ್ಲಿ ಅಗ್ರ ಕ್ರಮಾಂಕದ ನಿಕಿನ್ ಜೋಸ್, ಮಯಂಕ್ ಅಗರ್ವಾಲ್, ಅನೀಶ್ ಕೆ.ವಿ ಮತ್ತು ಕೃಷ್ಣನ್ ಶ್ರೀಜಿತ್ ಅವರನ್ನು ಕಳೆದುಕೊಂಡಿತು. ಮುಂಬಯಿ ವಿರುದ್ಧ ಅಜೇಯ ಶತಕ ಸಿಡಿಸಿ ತಂಡದ ಶುಭಾರಂಭಕ್ಕೆ ಕಾರಣವಾಗಿದ್ದ ಶ್ರೀಜಿತ್ ಮತ್ತು ಅರ್ಧ ಶತಕ ಗಳಿಸಿದ್ದ ಅನೀಶ್ ಕ್ರಮವಾಗಿ 1 ಮತ್ತು 15 ರನ್ಗಳಿಗೆ ಸೀಮಿತರಾದರು.