ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಾಸಕರಾದ ಬಸವನಗೌಡ ದದ್ದಲ್ ಹಾಗೂ ಬಿ. ನಾಗೇಂದ್ರ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ, ದಾಖಲೆಪತ್ರ ಪರಿಶೀಲನೆ ನಡೆಸಿದ್ದಾರೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ದದ್ದಲ್ ನಿವಾಸಕ್ಕೆ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ನಿನ್ನೆಯಷ್ಟೇ ಬಸನಗೌಡ ದದ್ದಲ್ ಎಸ್ಐಟಿ ವಿಚಾರಣೆ ಎದುರಿಸಿದ್ದರು.
ಬೆಂಗಳೂರಿನ ಯಲಹಂಕದಲ್ಲಿರುವ ಬಸನಗೌಡ ದದ್ದಲ್ ನಿವಾಸದ ಮೇಲೂ ದಾಳಿ ನಡೆದಿದೆ.ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ಮಾಜಿ ಸಚಿವ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ ಮನೆ ಮೇಲೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ಫ್ಲ್ಯಾಟ್ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಧಿಕಾರಿಗಳಿಂದ ಫ್ಲ್ಯಾಟ್ನಲ್ಲಿ ತನಿಖೆ ನಡೆಸಲಾಗುತ್ತಿದೆ.ಬೆಂಗಳೂರಿನಲ್ಲಿ ನಾಗೇಂದ್ರ, ಬಸವರಾಜ್ ದದ್ದಲ್, ಸುಚಿ ಸ್ಮಿತಾ, ದೀಪಾ, ಕೃಷ್ಣಮೂರ್ತಿ ಇವರಿಗೆ ಸಂಬಂಧಿಸಿದ ಒಟ್ಟು ಆರು ಕಡೆಗಳಲ್ಲಿ ದಾಳಿ ನಡೆದಿದೆ.ನಾಗೇಂದ್ರ ಅವರ ಆಪ್ತರು ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾ ದವರ ಮನೆ ಮೇಲೂ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಬೆಂಗಳೂರು ರಾಯಚೂರು, ಹೈದರಾಬಾದ್ ಸೇರಿದಂತೆ ಒಟ್ಟು 18 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.