ಬೆಂಗಳೂರು: ಕಳೆದೆರೆಡು ದಿನಗಳಿಂದ ಯಾರಿಗೂ ಸಿಗದೆ ನಾಪತ್ತೆಯಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವನಗೌಡ ದದ್ದಲ್ ಇಂದು ಪ್ರತ್ಯಕ್ಷರಾಗಿದ್ದಾರೆ.ಇಂದು ವಿಧಾನಸಭಾ ಕಲಾಪದಲ್ಲಿ ಪಾಲ್ಗೊಳ್ಳಲು ದದ್ದಲ್ ಅವರು ವಿಧಾನಸೌಧಕ್ಕೆ ಆಗಮಿಸಿದರು.
ವಿಧಾನಸಭೆ ಪ್ರವೇಶಿಸಲು ಅವರು ಆಗಮಿಸುತ್ತಿದ್ದಂತೆ ಮಾಧ್ಯಮದವರು ಅವರನ್ನು ಸುತ್ತುವರೆದು ಪ್ರಶ್ನೆ ಕೇಳಲು ಮುಂದಾದಾಗ ಯಾರಪ್ರಶ್ನೆಗೂ ಸಮರ್ಪಕವಾಗಿ ಉತ್ತರಿಸಿದೆ ತಾವು ವಿಧಾನಸಭಾ ಕಲಾಪದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ಸದನದಲ್ಲಿ ಮಾತನಾಡುತ್ತೇನೆ ಎಂದಷ್ಟೇ ಉತ್ತರಿಸಿ ತಮಗೆ ಯಾವ ನೋಟಿಸ್ ಬಂದಿಲ್ಲ ಎಂದು ಹೇಳಿ ಅಲ್ಲಿಂದ ತೆರಳಿದರು.
ಆದಾದ ನಂತರ ವಿಧಾನಸಭೆಯ ಮೊಗಸಾಲೆಯಲ್ಲಿರುವ ಮುಖ್ಯಮಂತ್ರಿಯವರ ಕಚೇರಿಗೆ ತೆರಳಿದ ದದ್ದಲ್ ಅವರೊಂದಿಗೆ ಕೆಳಕಾಲ ಚರ್ಚಿಸಿದ ಅವರು ನಂತರ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಕಚೇರಿಗೆ ತೆರಳಿ ಅವರೊಂದಿಗೂ ಕೆಲ ಕಾಲ ಮಾತುಕತೆ ನಡೆಸಿ ಹೊರಬಂದರು.ಇಂದು ಬೆಳಿಗ್ಗೆ ದದ್ದಲ್ ಅವರ ವಿಚಾರಕ್ಕೆ ಸಂಬಂಧ ಪಟ್ಟಂತೆ ಬಿಜೆಪಿ ವತಿಯಿಂದ ದದ್ದಲ್ ಕಾಣೆಯಾಗಿದ್ದಾರೆ ಎಂದು ಬಿಜೆಪಿ ಪೋಸ್ಟರ್ ಅಭಿಯಾನ ನಡೆಸಿತು.
ವಾಲ್ಮೀಕಿ ನಿಗಮದ ಹಣವನ್ನು ಲಪಟಾಯಿಸಿ, ಕಾಣೆಯಾಗಿದ್ದಾರೆ. ಬಸನಗೌಡ ದದ್ದಲ್. ವಯಸ್ಸು – 52. ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷರು. ಇವರು ಕಂಡ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಪೋಸ್ಟರ್ ಅಭಿಯಾನವನ್ನು ನಡೆಸಿತು.