ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಗುರುವಾರ ದಲಿತ ಕುಟುಂಬ ಹಾಗೂ ಸ್ಥಳೀಯ ಜಾಮಿಯಾ ಮಸೀದಿ ಸದಸ್ಯರ ನಡುವೆ ಜಮೀನಿನ ವಿಚಾರವಾಗಿ ವಾಗ್ವಾದ ನಡೆದಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ದಲಿತ ಕುಟುಂಬದ ಸದಸ್ಯರು ತುಂಡು ಜಮೀನು ತಮಗೆ ಸೇರಿದ್ದು, ಹಲವು ವರ್ಷಗಳಿಂದ ತಮ್ಮ ಸ್ವಾಧೀನದಲ್ಲಿದೆ ಎಂದು ಪ್ರತಿಪಾದಿಸಿದರೆ, ಇದು ಮಸೀದಿಯ ಒಡೆತನದಲ್ಲಿದೆ ಎಂದು ಮಸೀದಿಯ ಪ್ರತಿನಿಧಿಗಳು ವಾದಿಸಿದರು. ಪೊಲೀಸರು ಗ್ರಾಮಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಘಟನೆ ಗುರುವಾರ ನಡೆದಿದ್ದರೂ ಶುಕ್ರವಾರ ಬೆಳಕಿಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಜಮೀನಿನ ವಿವಾದವು 2016 ರಿಂದ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಕ್ಫ್ ಸಮಸ್ಯೆ ರೈತರ ಆತಂಕಕ್ಕೆ ಕಾರಣವಾಗಿದೆ. ರೈತರ ಭೂಮಿಯನ್ನು ಕಬಳಿಸಲು ಕಾಂಗ್ರೆಸ್ ಸರಕಾರ ಕಂದಾಯ ಅಧಿಕಾರಿಗಳಿಗೆ ವಕ್ಫ್ ಆಸ್ತಿ ಎಂದು ನಮೂದಿಸಿರುವಂತೆ ಸೂಚನೆ ನೀಡಿದೆ ಎಂದು ಆರೋಪಿಸಿದರು.
ಕಂದಾಯ ಅಧಿಕಾರಿಗಳು ರೈತರಿಗೆ ತೊಂದರೆ ನೀಡುವುದನ್ನು ಮುಂದುವರಿಸಿದರೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು. ಪೊಲೀಸ್ ಮೂಲಗಳ ಪ್ರಕಾರ, ಮಸೀದಿಯ ಪ್ರತಿನಿಧಿಗಳ ದೂರಿನ ಮೇರೆಗೆ ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ.