ನವದೆಹಲಿ: ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಉಪವಾಸವನ್ನು ಅಂತ್ಯಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಅಧಿಕಾರಿಗಳು ಮತ್ತು ಕೆಲವು ರೈತ ಮುಖಂಡರು ತಪ್ಪು ಅಭಿಪ್ರಾಯವನ್ನು ಮೂಡಿಸುತ್ತಿದ್ದಾರೆ ಎಂದು ಪಂಜಾಬ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ದಲ್ಲೆವಾಲ್ ಅವರ ಪ್ರತಿಭಟನೆಯನ್ನು ಹತ್ತಿಕ್ಕಲು ನ್ಯಾಯಾಲಯವು ಎಂದಿಗೂ ನಿರ್ದೇಶಿಸಿಲ್ಲ. ಆದರೆ, ಅವರ ಆರೋಗ್ಯದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತದೆ ಮತ್ತು ತುರ್ತಾಗಿ ಅವರಿಗೆ ವೈದ್ಯಕೀಯ ನೆರವು ನೀಡಬೇಕು ಎಂದಷ್ಟೇ ಬಯಸಿದೆ ಎಂದು ಹೇಳಿದರು.
ಈ ವಿಚಾರವಾಗಿ ನ್ಯಾಯಾಲಯವು ಹೆಚ್ಚಿನದನ್ನು ಹೇಳಲು ಬಯಸುವುದಿಲ್ಲ. ಆದರೆ, ಪಂಜಾಬ್ ಸರ್ಕಾರದ ಅಧಿಕಾರಿಗಳು ಮತ್ತು ಕೆಲವು ರೈತ ಮುಖಂಡರು ಮಾಧ್ಯಮಗಳಲ್ಲಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುವಂತೆ ತೋರುತ್ತಿದೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
‘ನಾವು ದಲ್ಲೆವಾಲ್ ಬಗ್ಗೆ ಕೆಲವು ರೈತ ಮುಖಂಡರ ವಿಶ್ವಾಸವನ್ನು ಪರಿಶೀಲಿಸಬೇಕಾಗಿದೆ’ ಎಂದು ಪೀಠ ಹೇಳಿತು.
ಪಂಜಾಬ್ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು, ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವ ಯಾವುದೇ ರೀತಿಯ ಪ್ರಯತ್ನವನ್ನು ನಿರಾಕರಿಸಿದರು ಮತ್ತು ದಲ್ಲೆವಾಲ್ ಅವರ ಉಪವಾಸವನ್ನು ಅಂತ್ಯಗೊಳಿಸದೆ ವೈದ್ಯಕೀಯ ನೆರವು ಪಡೆಯಲು ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಪಂಜಾಬ್ನ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಈ ವಿಷಯದಲ್ಲಿ ವರ್ಚುಯಲ್ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ, ನ್ಯಾಯಾಲಯದ ಸಂದೇಶ ಅಥವಾ ಆದೇಶವನ್ನು ಕೆಳ ಹಂತಗಳಿಗೆ ಪರಿಣಾಮಕಾರಿಯಾಗಿ ರವಾನಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಶಿಸುತ್ತೇವೆ ಎಂದು ಪೀಠ ಹೇಳಿದೆ.
ದಲ್ಲೆವಾಲ್ ಅವರನ್ನು ಹತ್ತಿರದ ಆಸ್ಪತ್ರೆಗೆ ವರ್ಗಾಯಿಸಲು ಪಂಜಾಬ್ ಸರ್ಕಾರಕ್ಕೆ ನ್ಯಾಯಾಲಯವು ಡಿಸೆಂಬರ್ 20 ರಂದು ನೀಡಿದ ಆದೇಶವನ್ನು ತಾವು ಪಾಲಿಸಿದ್ದೇವೆ ಎಂದು ದೃಢೀಕರಿಸುವ ಅಫಿಡವಿಟ್ ಸಲ್ಲಿಸುವಂತೆ ಪಂಜಾಬ್ನ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನ್ಯಾಯಾಲಯ ಸೂಚನೆ ನೀಡಿದೆ.
ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 6ಕ್ಕೆ ಮುಂದೂಡಿದೆ.
ಕನಿಷ್ಠ ಬೆಂಬಲ ಬೆಲೆಯ (ಎಂಎಸ್ಪಿ) ಕಾನೂನು ಖಾತರಿ ಸೇರಿದಂತೆ 2021ರಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಪ್ರತಿಭಟನಾನಿರತ ರೈತರಿಗೆ ನೀಡಿದ ಭರವಸೆಗಳನ್ನು ಪಾಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದಲ್ಲೆವಾಲ್ ಪರವಾಗಿ ಸಲ್ಲಿಸಲಾದ ಹೊಸ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.